ಸಮರ್ಪಣೆ, ಕಠಿಣ ಪರಿಶ್ರಮ ಯಶಸ್ಸಿನ ಸೂತ್ರ

dvg-jain-college.jpg
Published on

ದಾವಣಗೆರೆ  : ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ಯಶಸ್ಸು ನಿಮ್ಮ ದಾರಿಯಲ್ಲಿ ಬರುತ್ತದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ್ ಎಚ್. ಜಂಗಮಶೆಟ್ಟಿ ಹೇಳಿದರು.  ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಪದವಿ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.  ಕಲಿಕೆಯನ್ನು ನಿಲ್ಲಿಸಬೇಡಿ, ಕಲಿಯುವುದನ್ನು ಮುಂದುವರಿಸಿ. ಕೆಲಸ ಮಾಡುವ ಮನೋಭಾವ ಮತ್ತು ಕೌಶಲವನ್ನು ಬೆಳೆಸಿಕೊಳ್ಳಿ. ತಂಡವಾಗಿ ಒಬ್ಬರಿಗೊಬ್ಬರು ಸಹಾಯ ಮಾಡಿ, ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.  ಬೆಂಗಳೂರಿನ ಪ್ಯೂರ್ ಸ್ಟೋರೇಜ್ ಕಂಪನಿಯ ಟೆಕ್‌ಲೀಡ್ ಸಂಜೀವ್ ಎಂ. ಬಾಗೇವಾಡಿ ಮಾತನಾಡಿ, ದೇಶದ ಪ್ರಗತಿಯಲ್ಲಿ ಇಂಜಿನಿಯರುಗಳ ಪಾತ್ರ ಬಹು ಮುಖ್ಯವಾಗಿದೆ. ನೀವು ಬೆಳೆಯುವುದರ ಜತೆಗೆ ಕಾಲೇಜು ಮತ್ತು ಪಾಲಕರಿಗೆ ಗೌರವ ತರುವ ನಾಗರಿಕರಾಗಬೇಕು ಎಂದು ಹೇಳಿದರು.  ಕಾಲೇಜಿನ ಪ್ರಾಚಾರ್ಯ ಮತ್ತು ನಿರ್ದೇಶಕ ಡಾ. ಡಿ.ಬಿ. ಗಣೇಶ್ ಮಾತನಾಡಿ, ಕಾಲೇಜಿನ ಧ್ಯೇಯ ಮತ್ತು ಶೈಕ್ಷಣಿಕ ಸಾಧನೆಗಳನ್ನು ವಿವರಿಸಿದರು. ಇತ್ತೀಚೆಗೆ ಕಾಲೇಜಿಗೆ ನ್ಯಾಕ್ ಎ ಪ್ಲಸ್ ಮಾನ್ಯತೆ ಬಂದಿರುವುದನ್ನು ತಿಳಿಸಿದರು.  ಅಮೆರಿಕದ ಎಚ್.ಕ್ಯು. ಸಾಂಟಾ ಕ್ಲಾರಾ, ಅಕಾಡೆಮಿಕ್ಸ್ ಡೀನ್ ಡಾ. ಎನ್. ಮಧುಕೇಶ್ವರ, ಕಾರ್ಯಕ್ರಮದ ಸಂಚಾಲಕ ಡಾ. ಸಂತೋಷ್ ಎಂ. ನೇಜಕರ್, ಸಂಯೋಜಕರಾದ ಡಾ.ಬಿ.ಎಂ. ನಂದೀಶ್, ಮತ್ತು ಡಾ. ಪಿ.ಎಸ್. ಪ್ರಿತಾ, ಎಲ್ಲ ವಿಭಾಗದ ಮುಖ್ಯಸ್ಥರು, ಕಾಲೇಜಿನ ಅಧ್ಯಾಪಕರು, ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net