ಕಾಂಗ್ರೆಸ್ ಸರ್ಕಾರ ಶೀಘ್ರ ಪತನ

RENUKACHARYA-MP-mla-1_20241013014413611.jpg
Published on

ದಾವಣಗೆರೆ : ಮಹಿಷಾಸುರ ಮರ್ದನದ ರೀತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.  ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕುರ್ಚಿಗೆ ಟವಲ್ ಹಾಕಿಕೊಂಡು ಕಾಯುತ್ತಿರುವ ಕಾಂಗ್ರೆಸ್ ಮುಖಂಡರ ಒಳಜಗಳವೇ ಸರ್ಕಾರಕ್ಕೆ ಮುಳುವಾಗಲಿದೆ ಎಂದು ಭವಿಷ್ಯ ನುಡಿದರು.  ಸಿದ್ದರಾಮಯ್ಯ ಸ್ವಾಭಿಮಾನಿ ರಾಜಕಾರಣಿ. ಆದರೆ, ಅವರ ಮೇಲೆ ಗಂಭೀರ ಆರೋಪ ಬಂದಿದೆ. ಗೌರವದಿಂದ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಮಹತ್ವಾಕಾಂಕ್ಷಿಗಳಾಗಿರುವ ಡಿ.ಕೆ.ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಬಣಗಳು ಸಿಎಂ ಗಾದಿಯ ಮೇಲೆ ಕಣ್ಣಿಟ್ಟಿವೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಮತ್ತೆ ಸರ್ಕಾರ ರಚಿಸುವುದು ಅನುಮಾನ ಎಂದು ಹೇಳಿದರು.  ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ದ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದವರ ವಿರುದ್ಧ ಬಿಜೆಪಿ ಅಧಿಕಾರವಧಿಯಲ್ಲಿ 120 ಪ್ರಕರಣ ದಾಖಲಾಗಿದ್ದವು. ಅವುಗಳನ್ನು ರಾಜ್ಯ ಸರ್ಕಾರ ಹಿಂಪಡೆದು ದೇಶದ್ರೋಹಿ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ. ಅಧಿಕಾರಕ್ಕೆ ಬಂದು ಒಂದೂವರೆ ವರ್ಷದ ಬಳಿಕ ಕೋವಿಡ್ ನಿರ್ವಹಣೆಯನ್ನು ತನಿಖೆಗೆ ಆದೇಶಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net