

ಹೊನ್ನಾಳಿ : ಪಾಲಕರಿಗೆ ಅನಾರೋಗ್ಯವಿದೆ, ಅವರನ್ನು ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ವರ್ಗಾವಣೆ ಪಡೆದ ಕೆಲ ಸರ್ಕಾರಿ ನೌಕರರು ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿಲ್ಲ ಎಂದು ಶಾಸಕ ಡಿ.ಜಿ. ಶಾಂತನಗೌಡ ಅವರು ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ, ನಿಕಟಪೂರ್ವ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರೈತರು ಎಷ್ಟೇ ಹೋರಾಟ ನಡೆಸಿದರೂ ಅವರ ಬೇಡಿಕೆ ಈಡೇರಿಸುವುದು ಬಹಳ ಕಡಿಮೆ. ಆದರೆ ಸರ್ಕಾರಿ ನೌಕರರು ಬೇಡಿಕೆಗಾಗಿ ಮುಷ್ಕರಕ್ಕೆ ಕರೆ ನೀಡಿದ ಕೆಲವೇ ಗಂಟೆಗಳಲ್ಲಿ ಸರ್ಕಾರ ಮಾತುಕತೆಗೆ ಆಹ್ವಾನಿಸುತ್ತದೆ. ಅಂತಹ ಶಕ್ತಿಯುತ ಸಂಘಟನೆ ನಿಮ್ಮದು ಎಂದು ಹೇಳಿದರು. ಸರ್ಕಾರದ ಯೋಜನೆ ಯಶಸ್ವಿಯಾಗಬೇಕಾದರೆ ಸರ್ಕಾರಿ ನೌಕರರಿಂದ ಮಾತ್ರ ಸಾಧ್ಯ. ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಬಂದಾಗ ಅವರನ್ನು ಅಲೆದಾಡಿಸದೆ ನಿಷ್ಠೆಯಿಂದ ಕೆಲಸ ಮಾಡಿಕೊಡಿ ಎಂದು ಸೂಚಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರಿಗೆ ಸಮಸ್ಯೆ ಇದೆ ಎಂದಾಕ್ಷಣ ಪ್ರತಿಭಟನೆ ಮಾಡುವುದು ಸಂಘಟನೆಯ ಉದ್ದೇಶವಲ್ಲ. ರಾಜ್ಯದಲ್ಲಿ ಬರುವ ಪ್ರಮುಖ ಚುನಾವಣೆಗಳನ್ನು ನೋಡಿಕೊಂಡು ಪ್ರತಿಭಟನೆ ನಡೆಸಿದರೆ ಸರ್ಕಾರ ನಮ್ಮ ಮಾತನ್ನು ಕೇಳುತ್ತದೆ. ಅದಕ್ಕೆ ನಿಮ್ಮೆಲ್ಲರ ಶಕ್ತಿಯುತ ಬೆಂಬಲ ಅತ್ಯಗತ್ಯ ಎಂದರು. ಸರ್ಕಾರ ಏಳನೇ ವೇತನ ಆಯೋಗದ ವರದಿಯನ್ನು ಸುಲಭವಾಗಿ ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ನಾವು ಪ್ರತಿಭಟನೆಗೆ ಮುಂದಾದಾಗ ವರದಿ ಜಾರಿಗೆ ತಂದಿದೆ. ಎನ್‌ಪಿಎಸ್ ತೆಗೆದು ಒಪಿಎಸ್ ಮರು ಜಾರಿಗೆ ಸರ್ಕಾರದ ಜತೆ ಮಾತುಕತೆ ನಡೆಸಿದ್ದೇವೆ. ಇದರ ಪೂರಕವಾಗಿಯೇ ಸರ್ಕಾರ ಆಯೋಗ ರಚನೆ ಮಾಡಿದೆ ಎಂದರು. ಭದ್ರಾವತಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ವೀರೇಶ್ ಒಡೇನಪುರ ಮಾತನಾಡಿದರು. ರಾಜ್ಯ ಪರಿಷತ್ ಸದಸ್ಯ ಜಿ. ಓಬಳಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ತಾಲೂಕು ಅಧ್ಯಕ್ಷರಾದ ಕೆ. ಅರುಣ್, ನಾಗರಾಜ್ ನಾಯ್ಕ, ಧರ್ಮಪ್ಪ, ಅನಿಲ್‌ಕುಮಾರ್ ಅವರು ಅಧಿಕಾರ ಸ್ವೀಕರಿಸಿದರು. ತಹಸೀಲ್ದಾರ್ ಪಟ್ಟರಾಜಗೌಡ, ನಿಕಟಪೂರ್ವ ಅಧ್ಯಕ್ಷ ರವಿ, ನ್ಯಾಮತಿ ಇಒ ರಾಘವೇಂದ್ರ, ನೂತನ ಪದಾಧಿಕಾರಿಗಳಾದ ಕುಮಾರ್‌ಬಾರ್ಕಿ, ಚೌಹಾಣ್, ಹರೀಶ್, ರಾಜ್‌ಕುಮಾರ್, ಬಸವರಾಜಪ್ಪ, ನಾಗರಾಜ್, ಚೇತನ್, ರಾಜಾರಾಂ, ಸತೀಶ್ ಇತರರು ಇದ್ದರು.