

ದಾವಣಗೆರೆ : ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 2019 ರಲ್ಲಿ ನಡೆದಿದ್ದ ಚುನಾವಣೆ ವೇಳೆ ನೀಡಿದ್ದ ಭರವಸೆಗಳಲ್ಲಿ ಶೇ. 98 ರಷ್ಟು ಈಡೇರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು. ನಗರದ ಬಂಟರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಹಾಗೂ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಕಳೆದ 5 ವರ್ಷಗಳಲ್ಲಿ ನೌಕರರ ಪರವಾಗಿ 25 ಸರ್ಕಾರಿ ಆದೇಶಗಳಾಗಿವೆ. ಪ್ರತಿ ವರ್ಷ ಸರ್ಕಾರಿ ನೌಕರರ 10 ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತ ಬರಲಾಗಿದೆ ಎಂದು ತಿಳಿಸಿದರು. ಏಳನೇ ವೇತನ ಆಯೋಗದ ವರದಿ ಜಾರಿ, ರಜೆ ಸೌಲಭ್ಯ, ಹಬ್ಬದ ಮುಂಗಡ ಹಣ, ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ಸೇರಿ ಅನೇಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಘ ಯಶಸ್ಸು ಕಂಡಿದೆ. ಸಂಘಟನೆ ಹಾಗೂ ಮೂಲಸೌಲಭ್ಯದ ದೃಷ್ಟಿಯಿಂದ ಸಂಘವು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಹೇಳಿದರು. ಸರ್ಕಾರ ನಮ್ಮ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅದಕ್ಕೆ ತಕ್ಕಂತೆ ಆತ್ಮಸಾಕ್ಷಿಯ ಪ್ರಕಾರ ಎಲ್ಲ ನೌಕರರೂ ಕೆಲಸ ಮಾಡಬೇಕು. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂಚೂಣಿಯಲ್ಲಿದೆ ಎಂದರು. ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನ ಸವಾಲನ್ನು ಎದುರಿಸಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮುಂತಾದ ಉನ್ನತ ಹುದ್ದೆಗಳಿಗೆ ಏರಲು ಪ್ರಯತ್ನಿಸಬೇಕು. ಮುಖ್ಯವಾಗಿ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳ ಬೆನ್ನು ಹತ್ತದೇ, ಓದಿನ ಜತೆಗೆ ಕಲೆ, ಕ್ರೀಡೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಬೇಕು. ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಎಂಬಂತೆ ಇರಬೇಕು ಎಂದು ಸಲಹೆ ನೀಡಿದರು. ಪ್ರಶ್ನಿಸುವ ಮೂಲಕ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಶಿಸ್ತಿನಿಂದ ಬೆಳೆಸಬೇಕು. ಸೇವಾ ಮನೋಭಾವ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವ ಬಗ್ಗೆ ಯೋಚಿಸದೇ ಅವರನ್ನೇ ಆಸ್ತಿಯನ್ನಾಗಿ ರೂಪಿಸಿ ಎಂದು ತಿಳಿಸಿದರು. ಸಂಘದ ಜಿಲ್ಲಾಧ್ಯಕ್ಷ ವೀರೇಶ ಎಸ್. ಒಡೇನಪುರ ಪ್ರಾಸ್ತಾವಿಕ ಮಾತನಾಡಿ, 2019 ರಿಂದ 2024ರ ವರೆಗಿನ ಸಂಘದ ಅವಧಿಯು ಸುವರ್ಣ ಯುಗವಾಗಿದೆ. 7ನೇ ವೇತನ ಆಯೋಗದ ವರದಿ ಜಾರಿ ಸೇರಿ 25 ಆದೇಶಗಳಾಗಿವೆ. ಒಪಿಎಸ್ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ. ಜತೆಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತ ಬಂದಿದೆ ಎಂದು ವಿವರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ, ಹಿರಿಯ ಉಪಾಧ್ಯಕ್ಷರಾದ ಎಸ್. ಬಸವರಾಜು, ಎಂ.ವಿ. ರುದ್ರಪ್ಪ, ಖಜಾಂಚಿ ಡಾ.ಎಸ್. ಸಿದ್ದರಾಮಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಬಿ. ಪಾಲಾಕ್ಷಿ, ಬಿ.ಆರ್. ತಿಪ್ಪೇಸ್ವಾಮಿ, ಸಿ. ಗುರುಮೂರ್ತಿ, ರಾಮಪ್ಪ, ಹಾಲಪ್ಪ, ತಾಲೂಕು ಅಧ್ಯಕ್ಷರಾದ ಎಂ.ಕೆ. ಶಶಿಧರ್, ಸಿ.ಬಿ. ನಾಗರಾಜ್, ಎಸ್. ಸಂತೋಷ್, ಎಂ.ವಿ. ರವಿ, ವಿಜಯ ಮಹಾಂತೇಶ ಇದ್ದರು.