ಹೊಸ ಆಲೋಚನೆಗಳು ಬೆಳವಣಿಗೆಗೆ ಪೂರಕ

dvg-ignitron.jpg
Published on

ದಾವಣಗೆರೆ : ಇಂಜಿನಿಯರಿಂಗ್ ಮತ್ತು ನಾವೀನ್ಯತೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿಯಾಗಿದೆ. ಅವಕಾಶಗಳನ್ನು ಬಳಸಿಕೊಂಡು ಎತ್ತರಕ್ಕೆ ಬೆಳೆಯಬೇಕು ಎಂದು, ಡಿಎಕ್ಸೃ್ ಸಿ ಲಕ್ಸಾಫ್ಟ್ ಕಂಪನಿಯ ಇಂಜಿನಿಯರಿಂಗ್ ನಿರ್ದೇಶಕ ಬ್ರಹ್ಮಚೈತನ್ಯ ಚಿನ್ನಿವರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ, ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಮತ್ತು ತಾಂತ್ರಿಕ ಸಮುದಾಯ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ, ತಾಂತ್ರಿಕತೆಯ ಕಲಿಕಾ, ಪ್ರತಿಭಾ ಕೌಶಲದ ಹಬ್ಬ ‘ಇಗ್ನಿಟ್ರಾನ್’ ಉದ್ಘಾಟಿಸಿ ಮಾತನಾಡಿದರು.  ವಿದ್ಯಾರ್ಥಿಗಳು ಮಾಡುವ ಈ ರೀತಿಯ ಯೋಜನೆಗಳು ಹೊಸ ಆಲೋಚನೆಗಳನ್ನು ತರುತ್ತವೆ, ಅವು ನಿಮ್ಮನ್ನು ಮುಂದಿನ ಹಂತಗಳಿಗೆ ಕೊಂಡೊಯ್ಯುತ್ತದೆ. ‘ನಿಮ್ಮ ಪ್ರಾಜೆಕ್ಟ್‌ಗಳನ್ನು ಇಂದೇ ಆರಂಭಿಸಿ, ನಾಳೆ ಅಭಿವೃದ್ಧಿಪಡಿಸಿ, ಆದರೆ ನಿಲ್ಲಿಸದೇ ನಿರಂತರವಾಗಿಸಿ’ ಎಂದು ತಿಳಿಸಿದರು.  ನಿಮ್ಮ ಪರಿಕಲ್ಪನೆಗಳನ್ನು ಹೊಸ ಮಟ್ಟಕ್ಕೆ ಒಯ್ಯಲು ಪ್ರಯತ್ನಿಸಿ. ಸಹಜವಾಗಿ, ಉತ್ತಮ ಆಲೋಚನೆ ಬಂದರೆ ಅದನ್ನು ಮುಂದುವರಿಸಿ. ಆದರೆ ನೀವು ಈಗ ಏನು ಕೆಲಸ ಮಾಡುತ್ತಿದ್ದೀರಿ ಎಂಬುದು ಒಂದು ದಿನ ಉತ್ಪನ್ನ ಅಥವಾ ಕಂಪನಿಯಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮನವರಿಕೆ ಮಾಡಿದರು.  ನೀವು ಏನು ಮಾಡುತ್ತಿದ್ದೀರಿ ಎಂಬುದರಲ್ಲಿ ಒಂದು ಉದ್ದೇಶವನ್ನು ಕಂಡುಕೊಳ್ಳಿ. ಅರ್ಥಪೂರ್ಣ ಯೋಜನೆಗಳನ್ನು ರೂಪಿಸಲು ಗಮನಹರಿಸಿ. ಅವುಗಳು ಇತರರಿಗೆ ಸಹಾಯ ಮಾಡುವಂತಿರಬೇಕು. ನವೀನ ಆಲೋಚನೆಗಳನ್ನು ಬಂಡವಾಳ ಮಾಡಿಕೊಂಡರೆ ಬೆಳವಣಿಗೆ ಕಾಣಬಹುದು ಎಂದರು.  ಜಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಮಾತನಾಡಿ, ಭವಿಷ್ಯದಲ್ಲಿ ಶಿಕ್ಷಣವು ತುಂಬಾ ವಿಭಿನ್ನವಾಗಿ ಕಾಣುತ್ತದೆ. ಶಿಕ್ಷಕರು ಉಪನ್ಯಾಸ ನೀಡುವ ಮತ್ತು ಪರಿಕಲ್ಪನೆಗಳನ್ನು ವ್ಯಾಖ್ಯಾನಿಸುವ ಸಾಂಪ್ರದಾಯಿಕ ತರಗತಿ ಕೊಠಡಿಗಳು ಹಳೆಯದಾಗುತ್ತವೆ. ಚಾಲಿತ ಅಪ್ಲಿಕೇಶನ್‌ಗಳು ಮತ್ತು ಸಂವಾದಾತ್ಮಕ ವೆಬ್‌ಸೈಟ್‌ಗಳು ಮುನ್ನೆಲೆಗೆ ಬರುತ್ತವೆ ಎಂದು ಹೇಳಿದರು.  ಸಮಸ್ಯೆಗಳನ್ನು ಪರಿಹರಿಸುವ ನಿಮ್ಮ ಸಾಮರ್ಥ್ಯವು ಹೆಚ್ಚಾದಷ್ಟೂ ನಿಮ್ಮ ಪ್ರಭಾವ ಜಾಸ್ತಿಯಾಗುತ್ತದೆ. ನೀವು ರಾಜ್ಯದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿದರೆ ಅದು ಶ್ಲಾಘನೀಯ. ರಾಷ್ಟ್ರೀಯ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾದರೆ ಅದು ನಿಮಗೆ ಇನ್ನೂ ಹೆಚ್ಚಿನ ಗೌರವ ತಂದುಕೊಡುತ್ತದೆ ಎಂದು ತಿಳಿಸಿದರು.  ಕುಲಸಚಿವ ಡಾ. ಬಿ.ಎಸ್. ಸುನಿಲ್ ಕುಮಾರ್ ಮಾತನಾಡಿದರು. ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ಉಪ ನಿರ್ದೇಶಕ ಎಸ್.ಟಿ. ಮಾರುತಿ, ಪ್ರಾಚಾರ್ಯರು, ಡೀನ್‌ಗಳು, ನಿರ್ದೇಶಕರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ. ಎಚ್.ಎಸ್. ಕಿರಣ್ ಕುಮಾರ್ ಸ್ವಾಗತಿಸಿದರು. ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ ವಂದಿಸಿದರು.  ಕೌಶಲ ಪ್ರದರ್ಶನ : ಹ್ಯಾಕಥಾನ್‌ನಲ್ಲಿ 42 ತಂಡಗಳು, 168 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಶಿಕ್ಷಣದಲ್ಲಿನ ಸಮಸ್ಯೆಗಳ ಪರಿಹಾರ ಸೇರಿದಂತೆ ಸಾಮಾಜಿಕ ಉಪಯುಕ್ತತೆಯ ವಿಷಯಗಳ ಕುರಿತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಾಂತ್ರಿಕ ನಾವೀನ್ಯತೆಯ ಯೋಜನೆಗಳನ್ನು ಸಿದ್ಧಪಡಿಸಿದರು.  ಐಡಿಯಾಥಾನ್‌ನಲ್ಲಿ 43 ತಂಡಗಳಿಂದ 172 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿ, ತಾಂತ್ರಿಕತೆಯ ಬಳಕೆ ಮತ್ತು ಅಭಿವೃದ್ಧಿಗೆ ಪೂರಕವಾಗುವಂತೆ ಸ್ವಂತಿಕೆಯ ನಾವೀನ್ಯತೆಯ ಕಲ್ಪನೆಯನ್ನು ಪ್ರದರ್ಶಿಸಿದರು.  ಕ್ರಿಯಾಶೀಲತೆ ಮತ್ತು ಸಮಸ್ಯೆಗಳ ಪರಿಹಾರದ ಕೌಶಲ ಅಭಿವೃದ್ಧಿ ಹೆಚ್ಚಿಸುವ ಡಾಟಾ ಹಂಟ್ ಎಂಬ ಮೋಜಿನ ಸ್ಪರ್ಧೆಗೆ 27 ತಂಡಗಳಿಂದ 108 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಪೋಸ್ಟರ್ ಪ್ರೆಸೆಂಟೇಷನ್‌ನಲ್ಲಿ 29 ತಂಡಗಳಿಂದ 58 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿ, ತಂತ್ರಜ್ಞಾನ ಆಧಾರಿತವಾಗಿ ಪೋಸ್ಟರ್ ವಿನ್ಯಾಸಗಳನ್ನು ತಯಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net