ರಂಗೋಲಿಯಲ್ಲಿ ಅರಳಿದ ದೇಶಪ್ರೇಮ

dvg-rangoli-14.jpg
Published on

ದಾವಣಗೆರೆ :  ನಗರದ ಗಾಜಿನ ಮನೆಯಲ್ಲಿ ಬುಧವಾರ ರಂಗೋಲಿಗಳ ಚಿತ್ತಾರ ಬಿಡಿಸಲಾಗಿತ್ತು. ಮಹಿಳೆಯರು ತಮ್ಮ ಕಲೆಯನ್ನು ರಂಗೋಲಿಯಲ್ಲಿ ಅರಳಿಸಿ ದೇಶಪ್ರೇಮದ ಸಂದೇಶ ನೀಡಿದರು.  ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಸದಸ್ಯೆಯರು, ಇಲಾಖೆಯ ಉದ್ಯೋಗಿಗಳು ಜತೆಗೆ ಸಾರ್ವಜನಿಕರೂ (ಮಹಿಳೆಯರು) ಭಾಗವಹಿಸಿದ್ದರು.  ಗಾಜಿನ ಮನೆಯ ಆವರಣದಲ್ಲಿ 52 ವಿವಿಧ ಬಗೆಯ ರಂಗೋಲಿಗಳನ್ನು ಬಿಡಿಸಲಾಗಿದೆ. ತ್ರಿವರ್ಣ ಧ್ವಜವೂ ರಂಗೋಲಿಯಲ್ಲೇ ಮೂಡಿಬಂದಿದೆ. ಒಬ್ಬೊಬ್ಬರದು ಒಂದೊಂದು ಪರಿಕಲ್ಪನೆ ಇತ್ತು. ಹಳೇ ಚಿಕ್ಕನಹಳ್ಳಿ ನಾಗಮ್ಮ ಅವರು ಬಿಡಿಸಿದ ‘ಒಂದೆಡೆ ದೇಶ ಕಾಯುವ ಸೈನಿಕರು, ಮತ್ತೊಂದೆಡೆ ತನ್ನ ಗಂಡನಿಗಾಗಿ ಕಾಯುತ್ತಿರುವ ಗರ್ಭಿಣಿ’ ಪರಿಕಲ್ಪನೆಯ ರಂಗೋಲಿಯು ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ಅದಕ್ಕೆ ಪ್ರಥಮ ಬಹುಮಾನ ಲಭಿಸಿತು.  ಸಂಧ್ಯಾ ಅವರ ‘ಅನೇಕತೆಯಲ್ಲಿ ಏಕತೆಯ ಗೌರವ, ಮೆರಾ ಭಾರತ್ ಮಹಾನ್’ ರಂಗೋಲಿ ಎರಡನೇ ಬಹುಮಾನಕ್ಕೆ ಪಾತ್ರವಾಯಿತು. ಸೌಭಾಗ್ಯಾ ಅವರು ಬಿಡಿಸಿದ ‘ನನ್ನ ಧ್ವಜ ಸದಾ ಮೇಲೆ’ ರಂಗೋಲಿಯು ತೃತೀಯ ಬಹುಮಾನ ಪಡೆಯಿತು. ವನಜಾಕ್ಷಿ, ಮಂಜುಳಾ, ಸುಶೀಲಾ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಬಹುಮಾನ ವಿತರಿಸಿದರು. ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಕೆ.ಆರ್. ವಸಂತ, ಶಾಂತಯ್ಯ ಮಠ್, ರೇಷ್ಮಾ ಪರ್ವೀನ್ ತೀರ್ಪುಗಾರರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net