

ದಾವಣಗೆರೆ : ಶಿಕಾರಿಪುರ ಕಡೆಯಿಂದ ಸವಳಂಗ ಗ್ರಾಮದ ಮೂಲಕ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯ ಪೊಲೀಸರು ಬಂಧಿಸಿ, ಅವರಿಂದ 1.10 ಲಕ್ಷ ರೂ. ಮೌಲ್ಯದ 1 ಕೆಜಿ 160 ಗ್ರಾಂ ತೂಕದ ಗಾಂಜಾ ಸೊಪ್ಪು, ಒಂದು ಬೈಕ್, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಶಿಕಾರಿಪುರದ ಅಖಿಯಾಜ್ ಅಹಮ್ಮದ್ ಮತ್ತು ಹಾರನಹಳ್ಳಿಯ ಸೈಯ್ಯದ್ ಶಫೀವುಲ್ಲಾ ಬಂಧಿತರು. ಮಂಗಳವಾರ ಸಂಜೆ, ಮಾಚಗೊಂಡನಹಳ್ಳಿ ಗ್ರಾಮದ ಬಳಿ ಶಿಕಾರಿಪುರದ ಕಡೆಯಿಂದ ಸವಳಂಗ ಕಡೆಗೆ ಬರುತ್ತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ನೀಲಿ ಬಣ್ಣದ ಕವರ್‌ನಲ್ಲಿ ಗಾಂಜಾ ಇಡಲಾಗಿತ್ತು. ಎಸ್ಪಿ ಉಮಾ ಪ್ರಶಾಂತ ಹಾಗೂ ಚನ್ನಗಿರಿ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯ ಪಿಎಸ್‌ಐ ಸಾಗರ್ ಅತ್ತಾರ್‌ವಾಲಾ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿಯವರಾದ ಗೋವಿಂದರಾಜು, ಮಂಜಪ್ಪ, ಷಣ್ಮಖ, ಶಿವರಾಜ್, ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್. ರವಿ ಮತ್ತು ಪಿಎಸ್‌ಐ ಹೊಳಬಸಪ್ಪ ಹೊಳಿ ಮತ್ತು ಸಿಬ್ಬಂದಿ ಮಂಜಪ್ಪ, ನಾಗರಾಜ ನಾಯ್ಕ, ಶಿವರಾಜ್, ಪ್ರವೀಣ್ ಕುಮಾರ, ಚನ್ನೇಶ ಕಾರ್ಯಾಚರಣೆ ನಡೆಸಿದರು. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.