ವಿನಾಯಕನ ವಿವಿಧ ರೂಪಗಳ ದರ್ಶನ

dvg-thogataveera.jpg
Published on

ದಾವಣಗೆರೆ  : ಜಿಲ್ಲೆಯಲ್ಲೀಗ ಗಣೇಶೋತ್ಸವದ ಸಂಭ್ರಮ. ಗಲ್ಲಿ ಗಲ್ಲಿಗಳಲ್ಲಿ ವಿನಾಯಕನ ವಿವಿಧ ರೂಪಗಳ ದರ್ಶನ. ಜತೆಗೆ ಸುಂದರ ಪೆಂಡಾಲ್, ಮಂಟಪಗಳ ಆಕರ್ಷಣೆ. ಶ್ರದ್ಧಾ ಭಕ್ತಿಯ ಪೂಜೆ, ಪುನಸ್ಕಾರಗಳು ಒಂದೆಡೆಯಾದರೆ, ಹಬ್ಬದ ನೆಪದಲ್ಲಿ ಮಕ್ಕಳು, ಯುವಜನರು ಸಂಘಟಿತರಾಗುವುದು, ಅವರ ಉತ್ಸಾಹವನ್ನು ನೋಡುವುದೇ ಚೆಂದ.  ಪ್ರತಿಯೊಂದು ಬಡಾವಣೆ, ಬೀದಿಗಳಲ್ಲೂ ಗಜಮುಖನದೇ ಧ್ಯಾನ. ಗಣೇಶ ಚತುರ್ಥಿಯ ದಿನವಾದ ಬುಧವಾರ ಪ್ರತಿಷ್ಠಾಪನೆಗೊಂಡಿರುವ ಮೋದಕಪ್ರಿಯನ ಮೂರ್ತಿಗಳನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ, ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗೆ ಬರುವವರ ಸಂಖ್ಯೆ ಕಡಿಮೆ. ಸಂಜೆ 5 ಗಂಟೆಯ ನಂತರ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತ ಹೋಗುತ್ತದೆ. ರಾತ್ರಿ 10 ಗಂಟೆಯ ವರೆಗೂ ಜನರ ಸಾಲು ಕರಗುವುದಿಲ್ಲ.  ಎಂಸಿಸಿ ‘ಎ’ ಬ್ಲಾಕ್‌ನ ತೊಗಟವೀರ ಕಲ್ಯಾಣ ಮಂಟಪದಲ್ಲಿ ಹಿಂದು ಯುವಶಕ್ತಿ ಸಂಘಟನೆಯಿಂದ ಗೋವಿನ ಕೊರಳ ಗೆಜ್ಜೆಗಳ ಬೆನಕನನ್ನು ಪ್ರತಿಷ್ಠಾಪಿಸಲಾಗಿದ್ದು ಭಕ್ತರನ್ನು ಸೆಳೆಯುತ್ತಿದೆ. 13 ಅಡಿ ಎತ್ತರದ ಈ ಭವ್ಯ ಗಣಪತಿಯನ್ನು 9555 ಗೆಜ್ಜೆಗಳನ್ನು ಬಳಸಿ ನಿರ್ಮಿಸಲಾಗಿದೆ. ದರ್ಶನ ಪಡೆದ ನಂತರ ಭಕ್ತರು ಈ ಮೂರ್ತಿಯ ಮುಂದೆ ನಿಂತು ಸೆಲ್ಫಿ ಪಡೆಯುವ ದೃಶ್ಯ ಕಂಡುಬಂದಿತು.  ವಿನೋಬನಗರ 2ನೇ ಮುಖ್ಯ ರಸ್ತೆಯಲ್ಲಿ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ಮಹಾರಾಷ್ಟ್ರ ಮಾದರಿಯ ಜೇಜೂರಿ ಖಂಡೋಬಾ ಗಣಪತಿಯನ್ನು ಕೂಡಿಸಲಾಗಿದೆ. ಕೋಲ್ಕತ್ತದ ಕಲಾವಿದರು ನಿರ್ಮಿಸಿದ ಈ ಮೂರ್ತಿ 12 ಅಡಿ ಎತ್ತರವಿದೆ.  ಹೊಸ ಪೊಲೀಸ್ ಕ್ವಾರ್ಟರ್ಸ್ ಆವರಣದಲ್ಲಿ ವಿನಾಯಕ ಗೆಳೆಯರ ಬಳಗ ಕ್ಯೂಟಿಎಸ್ ಬಾಯ್ಸ ವತಿಯಿಂದ ಪ್ರತಿಷ್ಠಾಪಿಸಿರುವ 20 ಅಡಿ ಎತ್ತರದ ಉಗ್ರ ನರಸಿಂಹ ಮೂರ್ತಿ ಗಮನ ಸೆಳೆಯುತ್ತಿದೆ. ರಾಂ ಆ್ಯಂಡ್ ಕೋ ವೃತ್ತದಲ್ಲಿ ‘ರಾಂ ಆ್ಯಂಡ್ ಕೋ ಸರ್ಕಲ್ ಗೆಳೆಯರ ಬಳಗ’ದಿಂದ ನಿರ್ಮಿಸಿರುವ ಮಹಾಮಂಟಪ ಆಕರ್ಷಕವಾಗಿದೆ.  ಹೈಸ್ಕೂಲ್ ಮೈದಾನದಲ್ಲಿ ಹಿಂದು ಮಹಾಗಣಪತಿ ಟ್ರಸ್ಟ್‌ನಿಂದ ನಿರ್ಮಿಸಿದ ಬದರಿನಾರಾಯಣ ದೇಗುಲ ಮಾದರಿಯ ಮಂಟಪದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಬಿಐಇಟಿ ರಸ್ತೆ, ರಿಂಗ್ ರಸ್ತೆ , ಬೇತೂರು ರಸ್ತೆ ಸೇರಿ ವಿವಿಧೆಡೆ ವಿಭಿನ್ನ ಮಾದರಿಯ ಮೂರ್ತಿಗಳಿವೆ.  ಅಲಂಕಾರವೂ ವಿಶಿಷ್ಟವಾಗಿದೆ. ಮೂರ್ತಿಗಳಿಗೆ ಬಣ್ಣ ಬಣ್ಣದ ಹೂವು, ತುಳಸಿ ಮಾಲೆಗಳನ್ನು ಹಾಕಲಾಗಿದೆ. ಮೋದಕ, ಕರಿಗಡಬು ಸರವೂ ಇದೆ. ನವಿಲುಗಳ ಚಿತ್ರ, ಹೊಳೆಯುವ ಕಿರೀಟ, ಮೈದುಂಬಿದ ಆಭರಣಗಳಿಂದ ಕಳೆಗಟ್ಟಿದೆ.  ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರುತ್ತವೆ. ಅನೇಕ ಪೌರಾಣಿಕ ಪ್ರಸಂಗಗಳ ದೃಶ್ಯ ರೂಪಕ, ನಾಟಕ, ಹಾಡು, ನೃತ್ಯ, ಮಹಿಳೆಯರಿಗೆ ರಂಗೋಲಿ, ಮಕ್ಕಳಿಗೆ ಚಿತ್ರಕಲೆ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.  ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಗೃಹರಕ್ಷಕ ದಳದ ಸಿಬ್ಬಂದಿ ಸೇರಿ 1 ಸಾವಿರಕ್ಕೂ ಹೆಚ್ಚು ಮಂದಿಯನ್ನು ನಿಯೋಜಿಸಲಾಗಿದೆ. ಅದರಲ್ಲಿ ಮೂವರು ಡಿವೈಎಸ್ಪಿಗಳು, 18 ಜನ ಪೊಲೀಸ್ ಇನ್‌ಸ್ಪೆಕ್ಟರ್, 87 ಪಿಎಸ್‌ಐ, 654 ಜನ ಹೆಡ್ ಕಾನ್‌ಸ್ಟೇಬಲ್ ಮತ್ತು ಕಾನ್‌ಸ್ಟೇಬಲ್‌ಗಳಿದ್ದಾರೆ.  ...  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net