

ದಾವಣಗೆರೆ : ಸಂಭ್ರಮ, ಉತ್ಸಾಹಗಳು ಮೇcಳೈಸಿದ್ದ ಮಹಾಗಣಪತಿ ಶೋಭಾಯಾತ್ರೆಗೆ ಶನಿವಾರ ಜನಸಾಗರವೇ ಹರಿದು ಬಂದಿತು. ಮಹೋತ್ಸವಕ್ಕಾಗಿ ಇಡೀ ನಗರ ಕೇಸರಿಮಯವಾಗಿತ್ತು. ಪ್ರಮುಖ ರಸ್ತೆ, ವೃತ್ತಗಳಲ್ಲಿ ಬಂಟಿಂಗ್‌ಗಳ ಚಿತ್ತಾರವಿತ್ತು. ಸ್ಥಳೀಯರ ಜತೆಗೆ ಸುತ್ತಮುತ್ತಲಿನ ಗ್ರಾಮಗಳಿಂದ, ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಬೆಣ್ಣೆ ನಗರಿಯಲ್ಲಿ ಮೋದಕ ಪ್ರಿಯನ ವೈಭವದ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಹೈಸ್ಕೂಲ್ ಮೈದಾನದಿಂದ ಹೊರಟ ಶೋಭಾಯಾತ್ರೆ ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ಸರ್ಕಲ್, ಲಾಯರ್ ರಸ್ತೆ, ಪಿಬಿ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮಾರ್ಗವಾಗಿ ತೆರಳಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೊನೆಗೊಂಡಿತು. ಶೋಭಾಯಾತ್ರೆಯ ಮಾರ್ಗ ಮಧ್ಯೆ ಅಲ್ಲಲ್ಲಿ ದಾನಿಗಳು ಭಕ್ತರಿಗಾಗಿ ಕುಡಿಯುವ ನೀರು, ತಂಪು ಪಾನೀಯ ಹಾಗೂ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಿದ್ದರು. ಜತೆಗೆ ನೀರು, ಮಜ್ಜಿಗೆ, ಐಸ್‌ಕ್ರೀಮ್ ವ್ಯಾಪಾರ ಜೋರಾಗಿತ್ತು. ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಅವರು ಬೆಳಗ್ಗೆ ಹೈಸ್ಕೂಲ್ ಮೈದಾನದಲ್ಲಿ ವ್ನಿೇಶ್ವರನಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಹಿಂದು ಮಹಾ ಗಣಪತಿಯ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು, ರಾಜ್ಯ ಮಹಿಳಾ ಬಿ.ಜೆ.ಪಿ. ಉಪಾಧ್ಯಕ್ಷೆ ಜಯಮ್ಮ, ಜಿಲ್ಲಾ ಮಹಿಳಾ ಘಟಕದ ಮುಖಂಡರಾದ ಭಾಗ್ಯಾ ಪಿಸಾಳೆ ಇದ್ದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭಾವಚಿತ್ರವಿದ್ದ ಒಂದು ಡಿಜೆ, ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ ಮತ್ತು ಅವರ ಅಭಿಮಾನಿಗಳಿದ್ದ ಇನ್ನೊಂದು ಡಿಜೆ, ಜರೀಕಟ್ಟೆ ಗೆಳೆಯರ ಬಳಗದ ಮತ್ತೊಂದು ಡಿಜೆ ಇದ್ದವು. ಶ್ರೀನಿವಾಸ ದಾಸಕರಿಯಪ್ಪ ಅಭಿಮಾನಿಗಳೊಂದಿಗೆ ತಾವೂ ಹೆಜ್ಜೆ ಹಾಕಿದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಅವರೊಂದಿಗೆ ಮುಖಂಡ ಲೋಕಿಕೆರೆ ನಾಗರಾಜ ಇದ್ದರು. ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಬಿಜೆಪಿ ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಶಿವನಳ್ಳಿ ರಮೇಶ್ ಇತರರು ಮೆರವಣಿಗೆಯಲ್ಲಿ ಕಂಡುಬಂದರು. ಕೆಲವು ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಭಾವಚಿತ್ರವಿರುವ ಪ್ಲೆಕಾರ್ಡ್ ಹಿಡಿದಿದ್ದರು. ನೀಲಿ ಬಾವುಟಗಳೂ ಕಂಡುಬಂದವು. ...
* ಡಿಜೆ ಅಬ್ಬರ, ಸಕತ್ ಸ್ಟೆಪ್ಸ್ ಶೋಭಾಯಾತ್ರೆಯಲ್ಲಿ ಹಾಡು ಮತ್ತು ಕುಣಿತ ಹೈಲೈಟ್ ಆಗಿದ್ದವು. 6 ಡಿಜೆಗಳಿಂದ ಅಬ್ಬರಿಸಿದ ಸಂಗೀತಕ್ಕೆ ಭಕ್ತರು ಹೆಜ್ಜೆ ಹಾಕಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಯುವಜನರು ಕುಣಿಯುತ್ತಿದ್ದರೆ ರಸ್ತೆಗಳೇ ಡ್ಯಾನ್ಸ್ ಮಾಡುತ್ತಿರುವಂತೆ ಭಾಸವಾಗುತ್ತಿತ್ತು. ಮಹಿಳೆಯರಿಗಾಗಿಯೇ ಒಂದು ಡಿಜೆ ಮೀಸಲಾಗಿತ್ತು. ಯುವತಿಯರು ಹುಡುಗರಿಗೆ ಏನೂ ಕಮ್ಮಿಯಿಲ್ಲ ಎನ್ನುವಂತೆ ಸ್ಟೆಪ್ಸ್ ಹಾಕಿದರು. ಕೆಲವು ಮಹಿಳಾಮಣಿಗಳೂ ಗುಂಪಾಗಿ ನರ್ತಿಸಿದರು. ಮೆರವಣಿಗೆಯಲ್ಲಿ ಕೇಸರಿ ಶಲ್ಯ ಮತ್ತು ಪೇಟಾಗಳು ಗಮನ ಸೆಳೆದವು. ರಸ್ತೆಯ ಇಕ್ಕೆಲಗಳಲ್ಲಿ ಜನವೋ ಜನ. ಕೆಲವರು ಕಟ್ಟಡಗಳ ಮೇಲೆ ನಿಂತು ನೋಡಿದರೆ, ಇನ್ನೂ ಕೆಲವರು ಕಾಂಪೌಂಡ್ ಮೇಲೆ ಕುಳಿತು ದೃಶ್ಯವನ್ನು ವೀಕ್ಷಿಸಿದರು. ಡಿಜೆಯ ಸಂಗೀತದ ಅಬ್ಬರ ಹೇಗಿತ್ತೆಂದರೆ ಅದರ ಬೀಟ್ ಕಿವಿಗೆ ಬೀಳುತಿದ್ದಂತೆ ಪ್ರೇಕ್ಷಕರೂ ಮೈ ಕುಲುಕಿಸಿದರು. ಕೆಲವು ಪಾಲಕರು ಚಿಕ್ಕ ಮಕ್ಕಳನ್ನು ಹೆಗಲ ಮೇಲೆ ಕೂಡಿಸಿಕೊಂಡು ನರ್ತಿಸಿದರು. ಆಂಜನೇಯನ ಎತ್ತರವಾದ ಮೂರ್ತಿ ಹಾಗೂ ಛತ್ರಪತಿ ಶಿವಾಜಿ ಮೂರ್ತಿ ಮೆರವಣಿಗೆಯಲ್ಲಿ ಸಾಗಿದವು. ಶೋಭಾಯಾತ್ರೆ ಸಾಗಿದ ಮಾರ್ಗಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಡ್ರೋನ್ ಕ್ಯಾಮರಾಗಳು ಹಾರಾಡಿ ವಿಹಂಗಮ ನೋಟವನ್ನು ಚಿತ್ರೀಕರಿಸಿದವು. ಸಾರ್ವಜನಿಕರು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡರು. ಬೃಹತ್ ಬಾವುಟಗಳು ರಾರಾಜಿಸಿದವು. ... * ಪುಷ್ಪವೃಷ್ಟಿ ಶೋಭಾಯಾತ್ರೆಯು ಜಯದೇವ ವೃತ್ತಕ್ಕೆ ಬಂದಾಗ ಜೆಸಿಬಿ ಮೇಲಿನಿಂದ ಪುಷ್ಪವೃಷ್ಟಿ ಮಾಡಿದ್ದು ವಿಶೇಷವಾಗಿತ್ತು. ಹಿಂದು ಮಹಾಗಣಪತಿ ಮೂರ್ತಿ, ಆಂಜನೇಯ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳು ವೃತ್ತಕ್ಕೆ ಬಂದಾಗ ಹೂವಿನ ಮಳೆಗರೆಯಲಾಯಿತು. ಈ ದೃಶ್ಯ ಕಣ್ತುಂಬಿಕೊಂಡ ಭಕ್ತರು ಹರ್ಷೋದ್ಗಾರ ಮಾಡಿದರು. ...
* ಹೆಜ್ಜೆ ಹೆಜ್ಜೆಗೂ ಪೊಲೀಸರು ಹಿಂದು ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಹೈಸ್ಕೂಲ್ ಮೈದಾನದಿಂದ ಹಿಡಿದು ವಿಸರ್ಜನೆಯಾಗುವ ವರೆಗೆ ಮಾರ್ಗದುದ್ದಕ್ಕೂ ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಸ್ಥಳೀಯರಲ್ಲದೇ ನೆರೆಯ ಜಿಲ್ಲೆಗಳಿಂದ ಬಂದಿದ್ದ ಪೊಲೀಸರು ಭದ್ರತಾ ವ್ಯವಸ್ಥೆಗೆ ಕೈಜೋಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಸ್ವತಃ ಹಾಜರಿದ್ದು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಜನರ ಗುಂಪು ಜಾಸ್ತಿ ಸೇರಿದಾಗ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಪೊಲೀಸರು ನೋಡಿಕೊಂಡರು. ಅಲ್ಲಲ್ಲಿ ಕೆಲವು ಸಣ್ಣಪುಟ್ಟ ಗೊಂದಲಗಳು ಕಂಡುಬಂದಾಗ ತಕ್ಷಣ ಪೊಲೀಸರು ಮಧ್ಯ ಪ್ರವೇಶ ಮಾಡಿದರು. ಡಿಎಆರ್ ವಾಹನ, ಅಗ್ನಿಶಾಮಕ ಇಲಾಖೆಯ ವಾಹನಗಳು ಬೀಡು ಬಿಟ್ಟಿದ್ದವು. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳ ಓಡಾಟವನ್ನು ನಿಯಂತ್ರಿಸಲಾಯಿತು. ... *