

ದಾವಣಗೆರೆ : ಗಣೇಶ ಚತುರ್ಥಿಯಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದ್ದು ಮಣ್ಣಿನಲ್ಲಿ ಮಾಡಿದ ಹಾಗೂ ಬೆಲ್ಲದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳ ಮಾರಾಟವನ್ನು ನಿಷೇಧಿಸಲಾಗಿದೆ. ಮಹಾರಾಷ್ಟ್ರದಿಂದ ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಹರಿಹರದಲ್ಲಿ ಮಾರಾಟ ಮಾಡುತ್ತಿದ್ದ ವೇಳೆ 17 ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಮಣ್ಣಿನ ಅಥವಾ ಬೆಲ್ಲದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದರಿಂದ ಲಾಭವೇ ಹೆಚ್ಚು. ಮೊದಲ ಬಾರಿಗೆ ಜಿಲ್ಲೆಯಲ್ಲಿ ಬೆಲ್ಲದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಮಂಡ್ಯದಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದಾಗ ಅಲ್ಲಿನ ರೈತ ಉತ್ಪಾದಕ ಸಂಸ್ಥೆಯ ಮೂಲಕ ಬೆಲ್ಲದ ಗಣೇಶ ಮೂರ್ತಿ ತಯಾರಿಕೆಗೆ ಉತ್ತೇಜಿಸಲಾಗಿತ್ತು ಎಂದು ಹೇಳಿದರು.
ರೈತರು ಬೆಳೆದ ಕಬ್ಬಿನಿಂದ ಹಾಲನ್ನು ತೆಗೆದು ಅದರಲ್ಲಿ ಯಾವುದೇ ರಾಸಾಯನಿಕ ಬೆರೆಸದೆ ಪಾಕವನ್ನು ತಯಾರಿಸಿ ಅದರಿಂದ ಗಣೇಶ ಮೂರ್ತಿಯನ್ನು ಮಾಡಲಾಗುತ್ತದೆ. ಒಂದು ಗಣೇಶ ಮೂರ್ತಿಯನ್ನು ಕನಿಷ್ಠ 2 ಕೆಜಿ ಬೆಲ್ಲದಿಂದ ಮಾಡಬಹುದಾಗಿದೆ. ಇದರಿಂದ ರೈತರಿಗೂ ಆರ್ಥಿಕಾಭಿವೃದ್ಧಿಯಾಗಲಿದೆ. ರೈತ ಉತ್ಪಾದಕ ಕಂಪನಿಗಳಿಗೂ ಆದಾಯ ಬರಲಿದ್ದು ಆರ್ಥಿಕತೆ ಹಂಚಿಕೆಯಾಗಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯೇ ಬೆಲ್ಲದ ಗಣೇಶ ಮೂರ್ತಿಯನ್ನು ತಯಾರು ಮಾಡಲು ತಾಂತ್ರಿಕ ನೆರವನ್ನು ರೈತ ಉತ್ಪಾದಕ ಕಂಪನಿಗಳಿಗೆ ಮತ್ತು ಸ್ವ ಸಹಾಯ ಸಂಘಗಳಿಗೆ ಕೊಡಿಸುವ ಮೂಲಕ ಪರಿಸರ ಸ್ನೇಹಿ ಬ್ಯಾಗ್‌ಗಳ ಉತ್ಪಾದನೆ, ಮದುವೆ ಸಮಾರಂಭಗಳಲ್ಲಿ ನೀಡಲು ಬೆಲ್ಲದ ಅಚ್ಚುಗಳನ್ನು ಸಹ ತಯಾರು ಮಾಡಿಸುವ ಮೂಲಕ ಜಿಲ್ಲೆಯ ಜನರ ಆರ್ಥಿಕಾಭಿವೃದ್ಧಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಮಣ್ಣಿನ ಗಣೇಶ ಮೂರ್ತಿ ಮಾರಾಟವಾಗುವ ಸ್ಥಳದಲ್ಲಿಯೇ ಈ ಬಾರಿ ಬೆಲ್ಲದ ಮೂರ್ತಿಗಳು ಲಭಿಸುವಂತೆ ಮಾಡಲು ಮಹಾನಗರ ಪಾಲಿಕೆ ಹಾಗೂ ಪರಿಸರ ಇಲಾಖೆಯಿಂದ ಬೆಲ್ಲದ ಗಣೇಶ ಮೂರ್ತಿಗಳನ್ನು ತರಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
...
* 7 ಕಡೆ ಏಕಗವಾಕ್ಷಿ ಕೇಂದ್ರ
ಗಣೇಶ ಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಲು ಅನುಮತಿಗಾಗಿ ಜಿಲ್ಲೆಯಲ್ಲಿ 7 ಕಡೆ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ. ದಾವಣಗೆರೆ ಬಡಾವಣೆ ಠಾಣೆ, ಹರಿಹರ ನಗರಸಭಾ ಕಾರ್ಯಾಲಯ, ಮಲೇಬೆನ್ನೂರು ಪುರಸಭಾ ಕಚೇರಿ, ಜಗಳೂರು ಪೊಲೀಸ್ ಠಾಣೆ, ಹೊನ್ನಾಳಿ ಪೊಲೀಸ್ ಠಾಣೆ, ನ್ಯಾಮತಿ ಪೊಲೀಸ್ ಠಾಣೆ, ಚನ್ನಗಿರಿ ಪೊಲೀಸ್ ಠಾಣೆ ಇಲ್ಲಿ ಅನುಮತಿ ಪಡೆಯಬಹುದಾಗಿದೆ.
ಇಲ್ಲಿಯವರೆಗೆ ನೀಡಲಾದ 239 ಪರವಾನಗಿಯಲ್ಲಿ ದಾವಣಗೆರೆಯಲ್ಲಿ 217, ಹರಿಹರ 9, ಮಲೇಬೆನ್ನೂರು 2, ಜಗಳೂರು 6, ನ್ಯಾಮತಿ 1, ಹೊನ್ನಾಳಿ 1, ಚನ್ನಗಿರಿ 3 ಪರವಾನಗಿ ನೀಡಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಂತೇಶ್, ಪರಿಸರ ಅಧಿಕಾರಿ ಲಕ್ಷ್ಮೀಕಾಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಇದ್ದರು.