

ದಾವಣಗೆರೆ : ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಸಂಘಗಳಿಗೆ ಮುಕ್ತ ಅವಕಾಶ ನೀಡಬೇಕು ಎಂದು ಜಿಲ್ಲಾ ಗಣಪತಿ ಮಹಾಮಂಡಳಿ ಒಕ್ಕೂಟದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಬಾಲಗಂಗಾಧರ್ ತಿಲಕ್ ಆವರ ಪ್ರೇರೇಪಣೆಯಿಂದ ಹಿಂದುಗಳು ಗಣಪತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಧರ್ಮ ಮತ್ತು ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಗಣೇಶೋತ್ಸವ ಸಮಿತಿಗಳಿಗೆ ಕಿರುಕುಳ ನೀಡುವ ಮೂಲಕ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ದಾವಣಗೆರೆಯಲ್ಲಿ ಗಣಪತಿ ಸಂಘಗಳಿಂದ 400 ಕ್ಕೂ ಅಧಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆದರೆ, ಪೊಲೀಸ್ ಇಲಾಖೆಯು ಪರ್ಮಿಷನ್ ತೆಗೆದುಕೊಳ್ಳಿ, ಈ ರಸ್ತೆಯಲ್ಲಿ ಪ್ರತಿಷ್ಠಾಪನೆ ಮಾಡಬೇಡಿ, 9 ದಿನ ಪ್ರತಿಷ್ಠಾಪಿಸುವಂತಿಲ್ಲ ಎಂದು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ಕರೆದ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಒಂದೇ ಕಡೆ ಅನುಮತಿ ನೀಡುವುದಾಗಿ ಹೇಳಿದ್ದರೂ ಮಹಾನಗರ ಪಾಲಿಕೆ, ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಸಮಿತಿಗಳು ಅಲೆದಾಡಬೇಕಿದೆ ಎಂದರು. ಇನ್ನು ರಾಜ್ಯ ಸರ್ಕಾರ ಹೊಸದಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯುವಂತೆ ಆದೇಶ ಹೊರಡಿಸಿದೆ. ಹಿಂದು ಹಬ್ಬಗಳ ಆಚರಣೆಗೆ ಮಾತ್ರ ನಿರ್ಬಂಧ ಹೇರಲಾಗುತ್ತಿದ್ದು, ಹಿಂದುಗಳ ಹಬ್ಬಗಳನ್ನು ಆದಷ್ಟು ಕಡಿತಗೊಳಿಸುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಗಣೇಶ ಹಬ್ಬದ ಸಂದರ್ಭದಲ್ಲಿ ಅನ್ನ ಸಂತರ್ಪಣೆ ಮಾಡುವವರಿಗೆ ಆಹಾರ ಸುರಕ್ಷತೆ ಅನುಮತಿ ಪಡೆಯಲು ಹೇಳುತ್ತದೆ. ಶಾಲಾ ಬಿಸಿಯೂಟ, ಅಂಗನವಾಡಿ, ಹಾಸ್ಟೆಲ್‌ಗಳು, ಹೋಟೆಲ್ ಮತ್ತು ಡಾಬಾಗಳಲ್ಲಿ ಆಹಾರ ಸುರಕ್ಷತೆ ಬಗ್ಗೆ ತಪಾಸಣೆ ನಡೆಸಿದ್ದಾರೆಯೇ? ಎಂದು ಪ್ರಶ್ನಿಸಿದರು. ಪರಿಸರ ಇಲಾಖೆಗೆ ಗಣಪತಿ ಹಬ್ಬ ಬಂದ ತಕ್ಷಣ ಪರಿಸರದ ಜಾಗೃತಿ ಮೂಡುತ್ತದೆ ಎಂದು ಟೀಕಿಸಿದರು. ಜಿಲ್ಲಾಡಳಿತ ಗಣೇಶೋತ್ಸವಕ್ಕೆ ಅನುಮತಿ ನೆಪವೊಡ್ಡಿ ಕಿರುಕುಳ ನೀಡುವುದನ್ನು ಕೈಬಿಟ್ಟು ಶಾಂತಿಯುತ ಹಬ್ಬ ಆಚರಣೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಎಲ್ಲ ಗಣಪತಿ ಸಂಘಗಳಿಂದ ಎಸ್‌ಪಿ ಕಚೇರಿ ಮುಂದೆ ಗಣೇಶ ಮೂರ್ತಿಗಳನ್ನು ಇರಿಸುವ ಮೂಲಕ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಿ. ರಮೇಶ್‌ನಾಯ್ಕ, ಬೇತೂರು ಬಸವರಾಜ್, ಹರೀಶ್ ಹೊನ್ನೂರು, ಶಂಕರಗೌಡ ಬಿರಾದಾರ, ಎಚ್.ಬಿ. ರವಿಕುಮಾರ್, ಶಿವನಗೌಡ ಪಾಟೀಲ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು. ..........