ಪಿಒಪಿ ಗಣೇಶ ವಿಗ್ರಹಗಳ ಉತ್ಪಾದನೆ, ಮಾರಾಟ ನಿಷೇಧ

dc-gangadharaswamy-gm-Copy.jpg
Published on

ದಾವಣಗೆರೆ : ರಾಜ್ಯಾದ್ಯಂತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳ ಮಾರಾಟ, ಉತ್ಪಾದನೆ ಹಾಗೂ ವಿಸರ್ಜನೆ ನಿಷೇಧಿಸಿಲಾಗಿದ್ದು. ಗೌರಿ-ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.  ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡ ಯಾವುದೇ ರೀತಿಯ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಹಾಗೂ ಇತರೆ ವಿಗ್ರಹಗಳ ಉತ್ಪಾದನೆ, ಮಾರಾಟ ಮತ್ತು ಯಾವುದೇ ನೀರಿನ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.  ಸಾರ್ವಜನಿಕರು ಬಣ್ಣ ರಹಿತ, ಮಣ್ಣಿನ ಅಥವಾ ಇತರೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಬೇಕು. ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿಯೇ ಮೂರ್ತಿ ವಿಸರ್ಜಿಸಬೇಕು.  ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉಳಿದಿರುವ ಪಿಒಪಿ ರಾಸಾಯನಿಕ ಬಣ್ಣದ ವಿಗ್ರಹಗಳನ್ನು ತನಿಖೆ ಮಾಡಿ ವಶಕ್ಕೆ ಪಡೆದು ಒಂದೇ ಸ್ಥಳದಲ್ಲಿ ವಿಲೇವಾರಿ ಮಾಡಲು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.  ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸಾರ್ವಜನಿಕರು ಹಾಗೂ ಸಮಿತಿಗಳಿಗೆ ಸ್ಥಳೀಯ ಸಂಸ್ಥೆಗಳು ಮಾಹಿತಿ ನೀಡಬೇಕು. ಉತ್ಸವಕ್ಕೆ ಸಂಬಂಧಿಸಿದ ಅನುಮತಿ ಪಡೆದುಕೊಳ್ಳಬೇಕು. ಗಣೇಶ ಪೆಂಡಾಲ್‌ಗಳಲ್ಲಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.  ನಾವೀನ್ಯತೆಯುಳ್ಳ ಪರಿಸರ ಸ್ನೇಹಿ ಗೌರಿ-ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ವಿಸರ್ಜನಾ ವಿಧಾನಗಳ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಲು ಮತ್ತು ಸಾರ್ವಜನಿಕವಾಗಿ ಅನಧಿಕೃತ ಪ್ಲೆಕ್ಸ್, ಪ್ಲಾಸ್ಟಿಕ್ ಬ್ಯಾನರ್‌ಗಳ ಹಾವಳಿ ಕುರಿತಂತೆ ಮತ್ತು ಪಿಒಪಿ ಗೌರಿ- ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಮಾಡುವವರ ಮಾಹಿತಿ ಸಂಗ್ರಹಿಸಲು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net