

ದಾವಣಗೆರೆ : ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನಮ್ಮೆಲ್ಲರಿಗೂ ಆದರ್ಶಪ್ರಾಯರು. ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧಿ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ನಮ್ಮಿಂದಲೇ ಬದಲಾವಣೆ ಆರಂಭವಾಗಬೇಕು ಎಂದು ಪ್ರತಿಪಾದಿಸಿದ್ದ ಗಾಂಧೀಜಿ, ತಮ್ಮ ಜೀವನದುದ್ದಕ್ಕೂ ನಡೆ ನುಡಿ, ಆಚಾರ ವಿಚಾರ ಸಮಾನತೆ ಹೊಂದಿದ್ದರು. ಅವರ ಸರಳತೆ ಎಲ್ಲರಿಗೂ ಮಾದರಿ ಎಂದು ತಿಳಿಸಿದರು. ಹಳ್ಳಿಗಳು ಅಭಿವೃದ್ಧಿ ಹೊಂದಲು ಗ್ರಾಮರಾಜ್ಯವಾಗಬೇಕೆಂದು ಗಾಂಧೀಜಿ ಹೇಳಿದ್ದರು. ರೈತರು ದೇಶದ ಬೆನ್ನಲುಬು, ಹಳ್ಳಿಗಳು ಪ್ರಗತಿ ಸಾಧಿಸಿದರೆ ಭಾರತ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದಲ್ಲಿ ಹಸಿರು ಕ್ರಾಂತಿಯನ್ನು ನಡೆಸಿದರು. ಜೈ ಜವಾನ್, ಜೈ ಕಿಸಾನ್ ಎಂಬ ಕರೆ ನೀಡಿ ಕೃಷಿ ಉತ್ಪಾದಕತೆ ಹೆಚ್ಚಿಸಲು ಕ್ರಮ ಕೈಗೊಂಡರು. ಇವರು ಪಡೆಯುತ್ತಿದ್ದ 40 ರೂ.ಗಳ ಸಂಬಳದಲ್ಲಿ 10 ರೂ. ಉಳಿಸಿ ಬಡವರಿಗೆ ದಾನ ಮಾಡುತ್ತಿದ್ದರು. ಅಂತಹ ಸರಳ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಶ್ಲಾಘಿಸಿದರು. ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ವಿದ್ಯಾರ್ಥಿಗಳು ಗಾಂಧೀಜಿ ಅವರ ‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಎಂಬ ಆತ್ಮಕಥನವನ್ನು ಕಡ್ಡಾಯವಾಗಿ ಓದಬೇಕು. ಇದರಿಂದ ವಿದ್ಯಾರ್ಥಿಗಳ ಜೀವನವೇ ಬದಲಾಗುತ್ತದೆ, ಆತ್ಮಸ್ಥೈರ್ಯ ಬರುತ್ತದೆ ಎಂದರು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ಎಸ್. ಶಿವಕುಮಾರ್, ಮುಖಂಡರಾದ ಬಲ್ಲೂರು ರವಿಕುಮಾರ್, ಆವರೆಗೆರೆ ರುದ್ರಮುನಿ, ಎ. ನಾಗರಾಜ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ನಿರೂಪಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ವಂದಿಸಿದರು.