ಗಾಂಧೀಜಿ ಕನಸಿನ ಭಾರತ ಇಂದಿನ ಅಗತ್ಯ

dvg-hutatma.jpg
Published on

ದಾವಣಗೆರೆ : ಮಹಾತ್ಮ ಗಾಂಧೀಜಿ ತೋರಿದ ಮಾರ್ಗದಲ್ಲಿ ನಾವು ಸಾಗಬೇಕಿದ್ದು ಅವರ ಕನಸಿನ ಭಾರತವನ್ನು ಕಟ್ಟುವ ಅನಿವಾರ್ಯತೆ ಇದೆ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಬಿ.ಆರ್. ಪಾಟೀಲ್ ಹೇಳಿದರು.  ರಾಜ್ಯ ರೈತ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ, ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ದುಡಿಯುವ ಕೈಗಳೇ ನಮ್ಮ ಸಂಪತ್ತು ಎಂದು ಗಾಂಧೀಜಿ ಹೇಳಿದ್ದರು, ಆದರೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ನಿಸರ್ಗವನ್ನು ಹಾಳು ಮಾಡಿದ್ದೇವೆ. ಏಕ ವ್ಯಕ್ತಿ ಉಪಾಸನೆ ನಡೆಯುತ್ತಿದೆ. ಇದೆಲ್ಲವೂ ಅವರ ವಿಚಾರಗಳಿಗೆ ವಿರುದ್ಧವಾಗಿವೆ ಎಂದು ವಿಷಾದಿಸಿದರು.  ಅಧಿಕಾರ ವಿಕೇಂದ್ರೀಕರಣ ಆಗಬೇಕು ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಗ್ರಾಮ ಸ್ವರಾಜ್ಯದ ಕಲ್ಪನೆ ಮುಂದಿಟ್ಟಿದ್ದರು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಆಗುತ್ತಿಲ್ಲ. ಕೇಂದ್ರೀಕೃತ ವ್ಯವಸ್ಥೆಯ ಕಡೆಗೆ ಹೋಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.  ಗಾಂಧೀಜಿ ಕೂಡಾ ರಾಮನ ಭಕ್ತರಾಗಿದ್ದರು. ಆದರೆ ‘ರಾಮನ ಭಕ್ತರು’ ಎಂದು ಹೇಳುವವರೇ ಗಾಂಧೀಜಿ ಅವರ ಮೇಲೆ ಗುಂಡು ಹಾರಿಸಿದರು. ದೇಶದಲ್ಲಿ ನಾಥುರಾಮ ಗೋಡ್ಸೆ ಅವರ ದೇಗುಲ ಕಟ್ಟುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಶಾಂತಿ ನೆಲೆಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.  ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಿಸಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಕಬ್ಬು ಬೆಳೆಗಾರರ ಸಂಘದ ಮುಖಂಡ ತೇಜಸ್ವಿ ಪಟೇಲ್, ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್, ವಿಶ್ವ ಕರವೇ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಇದ್ದರು.  ರೈತ ಮುಖಂಡರಾದ ರಾಂಪುರದ ಬಸವರಾಜ, ಎಂ.ಪಿ. ಕರಿಬಸಪ್ಪ ಗೌಡರು, ಪೂಜಾರ್ ಅಂಜಿನಪ್ಪ ಪಾಲ್ಗೊಂಡಿದ್ದರು.  ...  (ಬಾಕ್ಸ್)  ಬಡವರ ಉದ್ಧಾರದ ಯೋಜನೆ ಬೇಕು  ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ ಮಾತನಾಡಿ, ಕಾರ್ಪೊರೇಟ್ ಜಗತ್ತಿಗೆ ಮಣೆ ಹಾಕಲಾಗುತ್ತಿದೆ. ರೈತರ, ಬಡವರ ಉದ್ಧಾರದ ಯೋಜನೆಗಳು ಬರಬೇಕು ಎಂದು ಹೇಳಿದರು.  ಸಿಬಿಲ್ ಸ್ಕೋರ್ ಮಾನದಂಡ ಮಾಡಿರುವುದು ರೈತ ವಿರೋಧಿ ನಿಯಮವಾಗಿದೆ. ರೈತರಿಗೆ ಸಾಗುವಳಿ ಪತ್ರ ಸಿಗುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ. ಕಬ್ಬಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಆತ್ಮಹತ್ಯೆ ಪ್ರಕರಣಗಳಾಗುತ್ತಿವೆ. ರೈತರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ನೌಕರರ ವೇತನ ಹೆಚ್ಚಿಸುವುದಾಗಿ ಒಂದು ವರ್ಷ ಮೊದಲೇ ಘೋಷಣೆ ಮಾಡಿದೆ. ಆದರೆ ರೈತರಿಗೆ ನ್ಯಾಯ ಸಿಗುತ್ತಿಲ್ಲ ಎಂದು ವಿಷಾದಿಸಿದರು.  ಮೀಸಲಾತಿ ಕೆಲವೇ ಜನರ ಸ್ವತ್ತಾಗಿದೆ. ತುಳಿತಕ್ಕೆ ಒಳಗಾದ ಅರ್ಹರಿಗೆ ಪ್ರಯೋಜನ ಸಿಗುತ್ತಿಲ್ಲ. ಸಮ ಸಮಾಜ ನಿರ್ಮಾಣವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net