ಕಲ್ಲು ತೂರಾಟ ಪ್ರಕರಣ ಸಂಬಂಧ 30 ಜನರ ಬಂಧನ

dvg-ganesha-galate-1.jpg
Published on

ದಾವಣಗೆರೆ : ನಗರದಲ್ಲಿ ಗುರುವಾರ ಸಂಜೆ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧ ಪೊಲೀಸರು 30 ಜನರನ್ನು ಬಂಧಿಸಿದ್ದಾರೆ.  ಒಟ್ಟು 4 ಎಫ್‌ಐಆರ್ ದಾಖಲಿಸಲಾಗಿದ್ದು ಅಷ್ಟೇ ಸಂಖ್ಯೆಯ ತಂಡಗಳನ್ನು ರಚಿಸಿ ತನಿಖೆ ತೀವ್ರಗೊಳಿಸಲಾಗಿದೆ. ಸಿಸಿ ಟಿವಿ ಮತ್ತು ಮೊಬೈಲ್ ದೃಶ್ಯಗಳನ್ನು ಪರಿಶೀಲಿಸಿ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು 18 ಕೆ.ಎಸ್.ಆರ್.ಪಿ. ತುಕಡಿ, 1 ಸಾವಿರ ಪೊಲೀಸರನ್ನು ನಿಯೋಜಿಸಿ ಬಂದೋಬಸ್ತ್ ಕೈಗೊಳ್ಳಲಾಗಿದೆ.  ಘಟನೆ ಹಿನ್ನೆಲೆಯಲ್ಲಿ ಎಡಿಜಿಪಿ (ಕಾನೂನು, ಸುವ್ಯವಸ್ಥೆ) ಹಿತೇಂದ್ರ ಕುಮಾರ್ ಶುಕ್ರವಾರ ನಗರಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ನಂತರ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಿದರು.  ...    (ಬಾಕ್ಸ್)  ತನಿಖೆ ಚುರುಕುಗೊಳಿಸಲು ಸೂಚನೆ  ಸುದ್ದಿಗಾರರೊಂದಿಗೆ ಮಾತನಾಡಿದ ಹಿತೇಂದ್ರ ಕುಮಾರ್, ಇದು ಪೂರ್ವ ಯೋಜಿತ ಕೃತ್ಯ ಎನಿಸುತ್ತಿಲ್ಲ, ಪ್ರಚೋದನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಂತಿದೆ. ಕಲ್ಲು ತೂರಾಟದಲ್ಲಿ ಒಬ್ಬರು ಸಿಪಿಐ ಮತ್ತು ಒಬ್ಬ ಕಾನ್‌ಸ್ಟೇಬಲ್‌ಗೆ ಗಾಯಗಳಾಗಿವೆ. ಒಬ್ಬ ಧಾರ್ಮಿಕ ಮುಖಂಡನಿಗೂ ಗಾಯವಾಗಿರುವ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ಲಾಠಿ ಪ್ರಹಾರ ಮಾಡಿ ಉದ್ರಿಕ್ತ ಗುಂಪನ್ನು ಚದುರಿಸಿದರು ಎಂದು ತಿಳಿಸಿದರು.  ನಾಲ್ಕೂ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಲು ಸೂಚನೆ ನೀಡಲಾಗಿದೆ. ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೆಲವು ದಿನಗಳ ಮಟ್ಟಿಗೆ ಬಂದೋಬಸ್ತ್ ಮುಂದುವರಿಸಲಾಗುವುದು. ಶಾಂತಿ ಸಭೆ ನಡೆಸುವುದು ಸೇರಿದಂತೆ ಪರಿಸ್ಥಿತಿ ತಿಳಿಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.  ಕೆಲವು ಕಡೆ ಬಿಯರ್ ಬಾಟಲ್‌ಗಳು ಸಿಕ್ಕಿವೆ ಎನ್ನುವ ವಿಷಯದ ಕುರಿತು ಪ್ರತಿಕ್ರಿಯಿಸಿ, ಸದ್ಯಕ್ಕೆ ಅಂಥದೇನೂ ಕಂಡುಬಂದಿಲ್ಲ. ಸಿಸಿ ಟಿವಿ, ಮೊಬೈಲ್ ದೃಶ್ಯಗಳಲ್ಲಿ ಅದನ್ನೆಲ್ಲ ಗಮನಿಸಲಾಗುವುದು. ಹೊರಗಿನಿಂದ ಬಂದವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಪ್ರಚೋದನಕಾರಿ ಹೇಳಿಕೆಯ ನಂತರ ಗುಂಪು ಕಟ್ಟಿಕೊಂಡು, ಪೊಲೀಸ್ ಠಾಣೆಗೆ ಬಂದು ದೂರು ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಅ. 5 ರಂದು ಮುಗಿಯಲಿದೆ. ಮೂರ್ತಿಗಳನ್ನು ಗೌರವಯುತವಾಗಿ ವಿಸರ್ಜಿಲು ಬೇಕಾದ ಭದ್ರತೆ ಒದಗಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

(ಬಾಕ್ಸ್)  
ತಡರಾತ್ರಿ ಕಾರ್ಯಾಚರಣೆ  ಗುರುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮನೆ ಮನೆಗೆ ನುಗ್ಗಿ ಗಲಭೆಕೋರರನ್ನು ಬಂಧಿಸಿದರು.  ಸಿಸಿ ಟಿವಿ ಮತ್ತು ಮೊಬೈಲ್ ದೃಶ್ಯಗಳನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಂಡರು. ಘಟನೆ ಹಿನ್ನೆಲೆಯಲ್ಲಿ ಇನ್ನೂ ಹಲವು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ನೆರೆಯ ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.  ಘಟನೆಯಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಕೆಲವು ಮನೆಗಳ ಗಾಜು ಒಡೆದಿವೆ. ಎರಡು ಕಾರುಗಳ ಗಾಜು ಪುಡಿಯಾಗಿವೆ.

ಡಿವೈಎಸ್ಪಿ ಸಮಯಪ್ರಜ್ಞೆ  
ಕಲ್ಲು ತೂರಾಟ ನಡೆದ ಸ್ಥಳಕ್ಕೆ ತೆರಳುವ ವೇಳೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಅವರು ಹೋಟೆಲೊಂದರ ಮುಂದಿದ್ದ ಬೋರ್ಡನ್ನೇ ಕೈಯಲ್ಲಿ ಹಿಡಿದು ಹೊರಟಿದ್ದು ಸಮಯಪ್ರಜ್ಞೆಗೆ ಸಾಕ್ಷಿಯಾಗಿತ್ತು.  ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ರಕ್ಷಣೆಗಾಗಿ ಕೇನ್ ಶೀಲ್ಡ್ ಉಪಯೋಗಿಸುತ್ತಾರೆ. ಆದರೆ ತಕ್ಷಣವೇ ಸ್ಥಳಕ್ಕೆ ಧಾವಿಸಬೇಕಿದ್ದ ಕಾರಣ ಅಲ್ಲಿ ಲಭ್ಯವಿದ್ದ ಬೋರ್ಡನ್ನೇ ಕೈಗೆತ್ತಿಕೊಂಡರು.  ‘ಕಲ್ಲು ತೂರಾಟ ನಡೆಯುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಮುಂದೆ ಹೋದೆ. ಕಲ್ಲುಗಳು ಬೀಳುತ್ತಿದ್ದವು. ಆಗ ಕೈಯಲ್ಲಿದ್ದ ಬೋರ್ಡ್‌ನಿಂದ ಸಹಾಯವಾಯಿತು. ಉದ್ರಿಕ್ತ ಗುಂಪನ್ನು ಚದುರಿಸಲು ಅನುಕೂಲವಾಯಿತು’ ಎಂದು ಮಲ್ಲೇಶ ದೊಡ್ಡಮನಿ ತಿಳಿಸಿದರು.  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net