ಅರಣ್ಯ ಭೂಮಿ ಕ್ರೋಡೀಕೃತ ದಾಖಲೆಗಳ ಅಭಿಯಾನ

dvg-forest_20250621002015239.jpg
Published on

ದಾವಣಗೆರೆ : ಸುಪ್ರೀಂ ಕೋರ್ಟ್ ಆದೇಶದನ್ವಯ ಅರಣ್ಯ ಭೂಮಿಗಳ ಏಕೀಕೃತ ದಾಖಲಾತಿಗಳನ್ನು ಕ್ರೋಡೀಕರಿಸುವ ಅಭಿಯಾನವನ್ನು ಹಮ್ಮಿಕೊಂಡು ಮುಂದಿನ ಮೂರು ತಿಂಗಳಲ್ಲಿ ಸರ್ವೇ ನಡೆಸಿ ದಾಖಲೀಕರಣ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.  ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಭೂಮಿಗಳ ಕ್ರೋಡೀಕೃತ ದಾಖಲೆಗಳ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಡೀಮ್ಡ್ ಫಾರೆಸ್ಟ್ ಎಂಬುದು ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಪ್ರಮುಖವಾಗಿದೆ. ಡೀಮ್ಡ್ ಫಾರೆಸ್ಟ್ ಸರ್ಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಅರಣ್ಯ ಎಂದು ಘೋಷಿತವಾಗದಿದ್ದರೂ, ವಾಸ್ತವವಾಗಿ ಅರಣ್ಯದ ಗುಣಲಕ್ಷಣಗಳನ್ನು ಹೊಂದಿದ್ದರೆ 1996ರ ಟಿ.ಎನ್. ಗೋದಾವರ್ಮನ್ ತಿರುಮಲ್ಪಾಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯನ್ವಯ ಅರಣ್ಯ ಭೂಮಿ ಎಂದು ನಮೂದಿಸಲಾಗುವುದು. ಅಲ್ಲದೇ ಇತರೆ ಉದ್ದೇಶಗಳಿಗಾಗಿ, ಮೀಸಲು, ಸಂರಕ್ಷಿತ ಅಥವಾ ಬೇರೆ ಯಾವುದೇ ಹೆಸರಿನಲ್ಲಿ ವರ್ಗೀಕರಿಸಲ್ಪಟ್ಟಿರುವ ಎಲ್ಲ ಅರಣ್ಯಗಳನ್ನು ಒಳಗೊಳ್ಳುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.  ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ನಂತರ, ಪ್ರತಿ ರಾಜ್ಯದಲ್ಲಿ ಡೀಮ್ಡ್ ಫಾರೆಸ್ಟ್ ಪ್ರದೇಶಗಳನ್ನು ಗುರುತಿಸಲು ತಜ್ಞರ ಸಮಿತಿಗಳನ್ನು ರಚಿಸಲು ಆದೇಶಿಸಿದೆ. ಅದರಂತೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸದ ಕಂದಾಯ ಇಲಾಖೆಯ ಅರಣ್ಯ ಪ್ರದೇಶ, ರೈತರಿಗೆ ಹಂಚಲ್ಪಟ್ಟಿದ್ದರೂ ಬೇಸಾಯ ಮಾಡದ ದಟ್ಟ ಅರಣ್ಯ ಭೂಮಿ, ಅರಣ್ಯ ಇಲಾಖೆಯ ತೋಟ ಸೇರಿದಂತೆ ಒಟ್ಟು 10,11,839.80 ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶವನ್ನು ಒಳಗೊಂಡಿದೆ ಎಂದರು.  ಚನ್ನಗಿರಿ ತಾಲೂಕಿನಲ್ಲಿ ನಾಲ್ಕು ಜಿಲ್ಲೆಯ ಭಾಗಗಳು ಸೇರುತ್ತವೆ. ಡೀಮ್ಡ್ ಫಾರೆಸ್ಟ್ ಪರಿಕಲ್ಪನೆಯು ಕರ್ನಾಟಕದಲ್ಲಿ ಹಲವಾರು ವಿವಾದಗಳಿಗೆ ಕಾರಣವಾಗಿದೆ. ಕೆಲವು ಪ್ರದೇಶಗಳನ್ನು ಡೀಮ್ಡ್ ಫಾರೆಸ್ಟ್ ಎಂದು ವರ್ಗೀಕರಿಸುವಾಗ ವೈಜ್ಞಾನಿಕ ಮಾನದಂಡಗಳನ್ನು ಬಳಸದೇ ಇರುವುದರಿಂದ ತೊಂದರೆ, ತೊಡಕುಗಳು ಉಂಟಾಗಿವೆ ಎಂದು ಮಾಹಿತಿ ನೀಡಿದರು.  ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರವು ಡೀಮ್ಡ್ ಫಾರೆಸ್ಟ್ ಪೂರ್ಣಗೊಳಿಸಲು ಸೂಚನೆ ನೀಡಿದೆ. ಅದರಂತೆ ಈ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಗ್ರಾಮೀಣ ಮತ್ತು ತಾಲೂಕು ಮಟ್ಟದಲ್ಲಿ ಹೊಸ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.  ಅರಣ್ಯ ಇಲಾಖೆ ಅಂಕಿ ಅಂಶಗಳನ್ವಯ ಜಿಲ್ಲೆಯಲ್ಲಿ 2017.37 ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶವೆಂದು ಗುರುತಿಸಲಾಗಿದೆ. ಇದರಲ್ಲಿ ಆನಗೋಡು, ಬೆಳಗುತ್ತಿ, ಸೊಕ್ಕೆ, ಮಲೇಬೆನ್ನೂರು, ಗೋವಿನಕೋವಿ, ಬೆಳಗುತ್ತಿ, ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಬರಲಿದ್ದು ಚನ್ನಗಿರಿ ಭದ್ರಾವತಿ ಅರಣ್ಯ ವಲಯಕ್ಕೆ ಸೇರುತ್ತದೆ. ಮುಂದಿನ ಮೂರು ತಿಂಗಳಲ್ಲಿ ಭೂ ಮಾಪನ ಇಲಾಖೆ ಎಲ್ಲ ಭೂ ಮಾಪಕರು, ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸರ್ವೇ ಕಾರ್ಯಕ್ಕೆ ನಿಯೋಜಿಸುವ ಮೂಲಕ ಅಭಿಯಾನದ ರೀತಿಯಲ್ಲಿ ಕೆಲಸ ಮಾಡಲು ಸೂಚನೆ ನೀಡಿ, ಈ ಸಿಬ್ಬಂದಿಯ ಸಭೆ ಕರೆಯುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ಅವರಿಗೆ ತಿಳಿಸಿದರು.  ಪ್ರಭಾರ ಡಿಡಿಎಲ್ಆರ್ ಕಸ್ತೂರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net