ಅಡುಗೆ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ

cook.jpg
Published on

ದಾವಣಗೆರೆ : ಅಡುಗೆ ಕಾರ್ಮಿಕರ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸುವ ಅಗತ್ಯವಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಹೇಳಿದರು.
 ರಾಜ್ಯ ಅಡುಗೆ ಕೆಲಸ ಮಾಡುವವರು ಮತ್ತು ಸಹಾಯಕರು, ಅಸಂಘಟಿ
ಸಂಘದಿಂದ ನಗರದ ರೋಟರಿ ಬಾಲಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಅಡುಗೆ ಕಾರ್ಮಿಕರ ನ್ಯಾಯಯುತ ಬೇಡಿಕೆಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
 ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 76 ವರ್ಷಗಳು ಕಳೆದರೂ ಅಡುಗೆ ಕಾರ್ಮಿಕರ ಬದುಕು ಶೋಚನೀಯವಾಗಿದೆ. ಅಡುಗೆ ಕಾರ್ಮಿಕರನ್ನೂ ಅಸಂಘಟಿತ ವಲಯದ ಕಾರ್ಮಿಕರ ಪಟ್ಟಿಗೆ ಸೇರಿಸದೆ ಇರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ಅಡುಗೆ ಕೆಲಸ ಮಾಡುವವರು ಒಗ್ಗಟ್ಟಾಗಿ ಸಂಘಟನೆಯ ಮೂಲಕ ತಮ್ಮ ನ್ಯಾಯಯುತ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಪ್ರತಿಪಾದಿಸಿದರು.
 ಕಲ್ಯಾಣ ಮಂಡಳಿಯಲ್ಲಿ ಸಂಘಟನೆಯ ಸದಸ್ಯರು ಪ್ರತಿನಿಧಿಗಳಾಗುವಂತೆ ನೋಡಿಕೊಳ್ಳಬೇಕು. ಅತ್ಯಂತ ಪವಿತ್ರ ವೃತ್ತಿಯಾದ, ಅಸಂಖ್ಯಾತ ಜನರಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಹಸಿವನ್ನು ನೀಗಿಸುವ ಅಡುಗೆ ಕೆಲಸದವರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸ, ಚಿಕಿತ್ಸಾ ವೆಚ್ಚ, ಅಪಘಾತ ಪರಿಹಾರ ಮತ್ತು ಪಿಂಚಣಿ ಸೌಲಭ್ಯಗಳು ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕಾಗಿದೆ ಎಂದರು.
 ಕರ್ನಾಟಕ ಜನ ಶಕ್ತಿ ಪಕ್ಷದ ಸಂಸ್ಥಾಪಕ ಕೆ.ಎನ್. ರವಿಕುಮಾರ್ ಮಾತನಾಡಿ, ಕಡ್ಡಾಯವಾಗಿ ಅಡುಗೆ ಗುತ್ತಿಗೆದಾರರಿಗೆ ಗುತ್ತಿಗೆ ಪರವಾನಗಿ ಪಡೆಯಲು ಆದೇಶಿಸಬೇಕು. ಅಂತಹ ಕಾರ್ಮಿಕರಿಗೆ ಉದ್ಯೋಗ ಪ್ರಮಾಣ ಪತ್ರ ವಿತರಿಸಬೇಕು. ಹೊಟೇಲ್, ಬೇಕರಿಗಳ ಮಾಲೀಕರು ಕಾರ್ಮಿಕರಿಗೆ ಉದ್ಯೋಗ ಪ್ರಮಾಣ ಪತ್ರ ವಿತರಿಸಬೇಕು. ಆ ಮೂಲಕ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಕಲ್ಯಾಣ ಮಂಡಳಿ ಮೂಲಕ ಅವರ ರಕ್ಷಣೆ ಮಾಡಬೇಕಿದೆ ಎಂದು ತಿಳಿಸಿದರು.
 ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಿ.ಜಿ. ಶಂಕರ್‌ರಾವ್ ನಾಡಿಗೇರ್ ಮಾತನಾಡಿ, ಸಂಘಟನೆಯಿಂದ ಮಾತ್ರ ನಾವು ಹಕ್ಕುಗಳನ್ನು ಪಡೆಯಲು, ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರಗಳು ಗಮನಹರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಘಟನೆಯನ್ನು ಬಲಗೊಳಿಸುತ್ತಿದ್ದು, ಎಲ್ಲ ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
 ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ವೀಣಾ, ನ್ಯಾಯಕ್ಕಾಗಿ ಹಕ್ಕು ವೇದಿಕೆಯ ರಾಜ್ಯ ಸಂಚಾಲಕ ರಾಜನಹಳ್ಳಿ ಮಂಜುನಾಥ್, ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್.ವಿ. ನಾಗರಾಜ್, ಕಾನೂನು ಸಲಹೆಗಾರ ಎಸ್. ವೆಂಕಟೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ರಾಘವೇಂದ್ರ, ಉಪಾಧ್ಯಕ್ಷ ಚಂದ್ರಶೇಖರ್ ಉಡುಪ, ಉಡುಪಿ ಶಂಕರ ಬ್ರಾಹ್ಮಣರ ಸಮಿತಿಯ ಜಿಲ್ಲಾಧ್ಯಕ್ಷ ಗುರು ಗಣೇಶ್ ಸೋಮಯಾಜಿ, ಎಂ. ಸುನೀಲ್ ಜೋಶಿ, ಪಿ.ವಿ. ಶ್ರೀನಿವಾಸ್, ಪ್ರಭು ವಸ್ತ್ರದ್, ಎಂ.ಲೋಕೇಶ್ ಗೌಡ್ರು, ಎಸ್. ಮುರುಗೇಶ್, ವೀರೇಶ್ ಇದ್ದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net