

ದಾವಣಗೆರೆ : ಬಾಕಿ ಇರುವ ಎರಡು ತಿಂಗಳ ವೇತನ ಬಿಡುಗಡೆಗೆ ಆಗ್ರಹಿಸಿ ದಾವಣಗೆರೆ ತಾಲೂಕು ಬಿಸಿಯೂಟ ತಯಾರಕರ ಫೆಡರೇಶನ್ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ತಾಲೂಕು ಪಂಚಾಯಿತಿ ಬಳಿ ಸೇರಿದ ಬಿಸಿಯೂಟ ತಯಾರಕರು ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಗಳ ಬಗ್ಗೆ ಗಮನ ಸೆಳೆದರು. ನಂತರ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ರಾಮಭೋವಿ ಮತ್ತು ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಲೇಪಾಕ್ಷಪ್ಪ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಎಲ್ಲ ಶಾಲೆಗಳಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ಜುಲೈ ತಿಂಗಳು ಮುಗಿದಿದ್ದರೂ ಜೂನ್ ತಿಂಗಳ ವೇತನ ಇನ್ನೂ ಪಾವತಿಯಾಗಿಲ್ಲ. ಇದರಿಂದಾಗಿ ಅವರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಕೂಡಲೇ ಜೂನ್ ಮತ್ತು ಜುಲೈ ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು, ತಾಲೂಕು ಅಧ್ಯಕ್ಷೆ ಮಳಲ್ಕೆರೆ ಜಯಮ್ಮ, ಪ್ರಧಾನ ಕಾರ್ಯದರ್ಶಿ ಜ್ಯೋತಿಲಕ್ಷ್ಮೀ, ಮುಖಂಡರಾದ ಪದ್ಮಾ, ಸಿ. ಮಾಲಾ, ಸರೋಜಾ, ಪಿ. ಮಂಜುಳಾ, ಹನುಮಕ್ಕ, ನಾಗಮ್ಮ, ರತ್ನಮ್ಮ, ಗೀತಾ, ರಾಧಮ್ಮ, ಎಚ್. ಭವ್ಯ ಇದ್ದರು.