

ದಾವಣಗೆರೆ : ಸಮಾಜದಲ್ಲಿನ ತೊಡಕುಗಳನ್ನು ನಿವಾರಣೆ ಮಾಡಲು ಜಾನಪದ ಸಹಾಯಕವಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಯುಗಧರ್ಮ ಪ್ರತಿಷ್ಠಾನದ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಪ್ರತಿಷ್ಠಾನದ ಉದ್ಘಾಟನೆ ಹಾಗೂ ಯುಗಧರ್ಮ ರಾಮಣ್ಣ ವಿರಚಿತ 6 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾನಪದವು ಹುಟ್ಟಿನಿಂದ ಸಾವಿನ ವರೆಗೆ ಬದುಕಿನ ಎಲ್ಲ ಅಂಶಗಳಿಗೆ ಕನ್ನಡಿ ಹಿಡಿಯುತ್ತದೆ. ಸಮಾಜದಲ್ಲಿ ನಡೆಯುವ ಮಹಿಳೆಯರು, ಧರ್ಮ, ವಿವಿಧತೆಯಲ್ಲಿ ಏಕತೆ ಮುಂತಾದ ವಿಷಯಗಳ ಬಗ್ಗೆ ಜಾನಪದದಲ್ಲಿ ಪ್ರಸ್ತಾಪವಿದೆ. ಈ ಹಿನ್ನೆಲೆಯಲ್ಲಿ ಜಾನಪದ ಕಲೆ ಮತ್ತು ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ತಿಳಿಸಿದರು. ಯುಗಧರ್ಮ ರಾಮಣ್ಣ ಜಾನಪದ ಸಾಹಿತ್ಯಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ಪ್ರತಿಭೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಸೃಷ್ಟಿಸಬೇಕು. ‘ಟೆಡ್‌ಎಕ್ಸ್’ ನಂಥ ವೇದಿಕೆಯಲ್ಲಿ ಇವರ ಪರಿಚಯವಾಗಬೇಕು. ಈ ನಿಟ್ಟಿನಲ್ಲಿ ಬಾಪೂಜಿ ವಿದ್ಯಾ ಸಂಸ್ಥೆಯಿಂದ ಯುಗಧರ್ಮ ರಾಮಣ್ಣ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು. ಕಲೆ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಉತ್ತಮ ವಾತಾವರಣ ಸೃಷ್ಟಿಸಬಹುದು. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ತಾಲೂಕು ಮಟ್ಟದಲ್ಲಿ ಕಲಾಭಿಮಾನಿಗಳನ್ನು ಸೇರಿಸಿ ಅವರಲ್ಲಿ ಕಲಾಸಕ್ತಿ ಮೂಡಿಸುವ ಪ್ರತಿಷ್ಠಾನದ ಕಾರ್ಯಕ್ಕೆ ಜನಪ್ರತಿನಿಧಿಯಾಗಿ ಬೆಂಬಲಿಸುವುದಾಗಿ ತಿಳಿಸಿದರು. ಕಳೆದ ವರ್ಷ ಕನ್ನಡ ರಾಜ್ಯೋತ್ಸವ ಅಂಗವಾಗಿ ಇಲ್ಲಿನ ಗಾಜಿನ ಮನೆಯಲ್ಲಿ 8 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದವು ಅದೇ ರೀತಿ ಈ ಬಾರಿಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಯೋಜನೆ ರೂಪಿಸಲಿದ್ದೇವೆ ಎಂದು ಹೇಳಿದರು. ಗಣೇಶ ಚತುರ್ಥಿ ವೇಳೆ ಡಿಜೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಹಬ್ಬಗಳಲ್ಲಿ ದೇಶದ ಕಲೆ ಹಾಗೂ ಸಾಹಿತ್ಯಕ್ಕೆ ಪ್ರಾತಿನಿಧ್ಯ ಕೊಡಬೇಕಿದೆ ಎಂದು ತಿಳಿಸಿದರು. ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಮನುಷ್ಯನಿಗೆ ಬೇಕಿರುವುದು ದೇಶದ ಹಿರಿಮೆ-ಗರಿಮೆ ಹಾಗೂ ಸಂಸ್ಕೃತಿ, ಸಂಸ್ಕಾರ. ಇದನ್ನು ಅರಿತು ಬದುಕಿದರೆ ಎಲ್ಲರ ಬಾಳು ಬಂಗಾರವಾಗಲಿದೆ ಎಂದರು. ಸಂಸದರು ಮತ್ತು ಶಾಸಕರ ಅನುದಾನದಲ್ಲಿ ಪ್ರತಿಷ್ಠಾನಕ್ಕೆ ನಿಯಮಾನುಸಾರ ಸಾಧ್ಯವಿರುವ ನೆರವು ನೀಡಲಾಗುವುದು. ವೈಯಕ್ತಿಕವಾಗಿ ಪ್ರತಿಷ್ಠಾನಕ್ಕೆ 1 ಲಕ್ಷ ರೂ. ದತ್ತಿಯಾಗಿ ನೀಡುತ್ತೇನೆ ಎಂದು ಘೋಷಿಸಿದರು. ಇದೇ ವೇಳೆ ಚಿಕ್ಕಜಾಜೂರಿನ ಮಹೇಂದ್ರಪ್ಪ ಅವರಿಗೆ ಪ್ರಥಮ ವರ್ಷದ ‘ಯುಗಧರ್ಮ ಪ್ರಶಸ್ತಿ’ ನೀಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಧಾಕೃಷ್ಣ ಪಲ್ಲಕ್ಕಿ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಡಾ. ಜಗನ್ನಾಥ್ ಕೆ. ಡಾಂಗೆ, ದಾದಾಪೀರ್ ನವಿಲೇಹಾಳ್, ಬರಹಗಾರ ಧನಂಜಯಪ್ಪ, ಕೆ.ಆರ್. ಮಂಜುನಾಥ್ ಇದ್ದರು.