ವಿಶಿಷ್ಟ ಕಲೆ, ಸಂಸ್ಕೃತಿ ಬಿಂಬಿಸುವ ಬಂಜಾರ ಸಮುದಾಯ

art.jpg
Published on

ದಾವಣಗೆರೆ : ಬಂಜಾರ ಸಮುದಾಯ ವಿಶಿಷ್ಟ ಕಲೆ ಮತ್ತು ಸಂಸ್ಕೃತಿಯನ್ನು ಹೊಂದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಹೇಳಿದರು.
 ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಅನುದಾನಮ್ ಚಾರಿಟೆಬಲ್ ಟ್ರಸ್ಟ್, ನಿಹಾರಿಕ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಭವಾನಿ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಾನಪದ ಕಲಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಬಂಜಾರ ಸಮಾಜದವರು ಕಲೆಯನ್ನು ಉಳಿಸಿ ಪೋಷಿಸಿಕೊಂಡು ಬಂದಿದ್ದಾರೆ. ಅದರ ಮೂಲಕವೇ ಒಗ್ಗಟ್ಟು ಕಾಯ್ದುಕೊಂಡಿದ್ದಾರೆ. ವಿವಿಧ ಕಲಾ ಪ್ರಕಾರಗಳಲ್ಲಿ ಅವರು ಸಾಧನೆ ಮಾಡಿದ್ದಾರೆ ಎಂದು ಬಣ್ಣಿಸಿದರು.
 ಸೇವಾಲಾಲ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಕಲೆಯ ವೈವಿಧ್ಯತೆಯನ್ನು ನೋಡಬಹುದು. ಆ ಸಮುದಾಯದವರು ಸಂಸ್ಕೃತಿಯ ಬಗ್ಗೆ ಗೌರವ ನೀಡುವ ಗುಣ ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
 ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ತವರುಮನೆ ಇದ್ದಂತೆ. ಇಲಾಖೆ ಇರುವುದೇ ಕಲಾವಿದರಿಗಾಗಿ. ನೇರವಾಗಿ ಇಲಾಖೆಗೆ ಬಂದು ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು. ಮಧ್ಯವರ್ತಿಗಳನ್ನು ಅವಲಂಬಿಸಬಾರದು ಎಂದು ಹೇಳಿದರು.
 ಕಲಾವಿದರು ಒಳ್ಳೆಯ ಪ್ರದರ್ಶನ ನೀಡಿ ಅನುದಾನದ ಸದ್ಬಳಕೆ ಮಾಡಿಕೊಳ್ಳಬೇಕು. ಕೆಲವು ಸಂಸ್ಥೆಗಳು ಅನುದಾನ ಪಡೆದರೂ ಅವರ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
 ಅನುದಾನಮ್ ಟ್ರಸ್ಟ್‌ನ ಮುಖ್ಯ ಟ್ರಸ್ಟಿ ಎಲ್. ಕುಬೇರನಾಯ್ಕ ಪ್ರಾಸ್ತಾವಿಕ ಮಾತನಾಡಿ, ತಮ್ಮ ಟ್ರಸ್ಟ್ 2014-15 ರಿಂದ ಸಮಾಜಮುಖಿಯಾಗಿ ಕೆಲಸ ಮಾಡುತ್ತ ಬಂದಿದೆ ಎಂದು ತಿಳಿಸಿದರು.
 ಮಹಾನಗರ ಪಾಲಿಕೆ ಸದಸ್ಯರಾದ ಮೀನಾಕ್ಷಿ ಜಗದೀಶ್, ವಕೀಲ ಎನ್. ಜಯದೇವ ನಾಯ್ಕ, ಎಸ್. ನಂಜಾನಾಯ್ಕ, ಗೋವಿಂದ ನಾಯ್ಕ, ಪೀರ‌್ಯಾನಾಯ್ಕ, ಬಸವರಾಜ ನಾಯ್ಕ, ಲಲಿತಾ, ಮನೋಹರ್ ಇದ್ದರು. ಎಚ್. ಶಾಂತಾನಾಯ್ಕ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net