

ದಾವಣಗೆರೆ : ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ತುಂಗಭದ್ರಾ ನದಿಯಲ್ಲಿ ನೀರು ಅಪಾಯದ ಮಟ್ಟವನ್ನು ಸಮೀಪಿಸುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ. ಹರಿಹರ ತಾಲೂಕಿನ ಫತ್ಯಾಪುರ-ಉಕ್ಕಡಗಾತ್ರಿ ಹಾಗೂ ತುಮ್ಮಿನಕಟ್ಟೆ-ಉಕ್ಕಡಗಾತ್ರಿ ರಸ್ತೆಗಳ ಸಂಪರ್ಕ ಕಡಿತವಾಗಿದೆ. ಉಕ್ಕಡಗಾತ್ರಿಯ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ದೇವಾಲಯವನ್ನು ನದಿ ನೀರು ಸುತ್ತುವರಿದಿದೆ. ಅಲ್ಲಿನ ಜವಳ ಮಂದಿರ ಹಾಗೂ ಸ್ನಾನ ಘಟ್ಟಗಳು ಸಂಪೂರ್ಣ ಮುಳುಗಡೆಯಾಗಿವೆ. ನದಿ ತೀರದ ಜಮೀನುಗಳಲ್ಲಿ ಮೆಕ್ಕೆಜೋಳ, ಭತ್ತ, ತರಕಾರಿ ಬೆಳೆ, ತೆಂಗಿನ ತೋಟಗಳು, ಕೃಷಿ ಪಂಪ್‌ಸೆಟ್‌ಗಳು ಜಲಾವೃತಗೊಂಡಿವೆ. ಲಕ್ಷಾಂತರ ರೂ. ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಹೊನ್ನಾಳಿ ತಾಲೂಕಿನ ಮರಿಗೊಂಡನಹಳ್ಳಿ, ಕೋಟೆಹಾಳ್ ಹಾಗೂ ಕುಳಗಟ್ಟೆ ಗ್ರಾಮದ ಸುಮಾರು 100 ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ, ಆದರೆ ಅಲ್ಲಿ ಇನ್ನೂ ಭತ್ತ ನಾಟಿಯಾಗಿಲ್ಲ. ಕೆಲವು ಕಡೆ ಅಡಕೆ ತೋಟಗಳು ಜಲಾವೃತವಾಗಿವೆ. ಹೊನ್ನಾಳಿ ಪಟ್ಟಣದ ಬಾಲ್‌ರಾಜ್‌ಘಾಟ್‌ನ 16 ಕುಟುಂಬ ಹಾಗೂ ಬಂಬು ಬಜಾರ್‌ನ 4 ಕುಟುಂಬಗಳ 96 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.