ಪ್ರವಾಹ ವಿಷಯದಲ್ಲಿ ಬೇಡ ರಾಜಕೀಯ

rev.jpg
Published on

ದಾವಣಗೆರೆ : ಪ್ರವಾಹ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದರು.  ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹ ಆಗುತ್ತದೆ ಎಂದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅತಿವೃಷ್ಟಿ ಆಗಿರುವ ಸ್ಥಳಕ್ಕೆ ಸಂಬಂಧಪಟ್ಟ ಸಚಿವರು ಭೇಟಿ ನೀಡಿದ್ದಾರೆ ಎಂದು ತಿಳಿಸಿದರು.  ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿರುವಾಗಲೇ ಜಾರಿ ನಿರ್ದೇಶನಾಲಯ (ಇ.ಡಿ) ಹಸ್ತಕ್ಷೇಪ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಬಿಜೆಪಿ ಅಧಿಕಾರ ಅವಧಿಯ 21 ಹಗರಣಗಳು ತನಿಖೆ ಹಂತದಲ್ಲಿವೆ. ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರಕರಣದಲ್ಲಿ ಬಿಜೆಪಿ ಮುಖಂಡರು ಸಿಕ್ಕಿಬಿದ್ದಿಲ್ಲವೆ ಎಂದು ಪ್ರಶ್ನಿಸಿದರು.  ಪ್ರತಿಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರದ ಪ್ರತಿಯೊಂದು ಹೆಜ್ಜೆಯಲ್ಲಿಯೂ ತಪ್ಪುಗಳನ್ನು ಹುಡುಕುವ ಕಾರ್ಯದಲ್ಲಿ ನಿರತವಾಗಿದೆ. ಗ್ಯಾರಂಟಿ ಯೋಜನೆ, ಪ್ರವಾಹ ಸೇರಿ ಪ್ರತಿಯೊಂದು ವಿಚಾರವನ್ನು ರಾಜಕೀಕರಣಗೊಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net