ಕೇಂದ್ರ ಸ್ಥಳದಲ್ಲಿದ್ದು ನೆರೆ ಹಾವಳಿ ನಿಭಾಯಿಸಿ

hnl.jpg
Published on

ಹೊನ್ನಾಳಿ: ನದಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಯಾವ ಕ್ಷಣದಲ್ಲಾದರೂ ನದಿ ನೀರು ಅಪಾಯದ ಮಟ್ಟ ಮೀರಬಹುದು. ಆದ್ದರಿಂದ ಎಲ್ಲ ಅಧಿಕಾರಿಗಳು ಕೇಂದ್ರಸ್ಥಳದಲ್ಲಿ ಇದ್ದು ನೆರೆಹಾವಳಿ ನಿಭಾಯಿಸಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಸೂಚಿಸಿದರು.  ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ನೇತೃತ್ವದ ಕಂದಾಯ ಇಲಾಖೆಯ ಸಭೆ ನಡೆಸಿ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು.  ಅಗತ್ಯಬಿದ್ದರೆ ತಕ್ಷಣ ಆರೈಕೆ ಕೇಂದ್ರ ತೆರೆಯಬೇಕು, ಅನಧಿಕೃತ ಮನೆಗಳಲ್ಲಿ ವಾಸ ಮಾಡುತ್ತಿದ್ದರೆ ಅಂಥವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡವಂತೆ ಶಾಸಕರು ಸೂಚನೆ ನೀಡಿದರು.  ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸುಮಾರು 25 ಮನೆಗಳಿಗೆ ಹಾನಿಯಾಗಿದೆ. ಅದೇ ರೀತಿ ಅವಳಿ ತಾಲೂಕಿನಿಂದ 2.35 ಎಕರೆ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ಹೊನ್ನಾಳಿ ತಾಲೂಕಿನಲ್ಲಿ 9 ಪಕ್ಕ ಮನೆಗೆ, ನ್ಯಾಮತಿ ತಾಲೂಕಿನಲ್ಲಿ 15 ಪಕ್ಕಾ ಮನೆಗೆ ಹಾನಿಯಾಗಿದೆ. ಸರ್ಕಾರದಿಂದ ಪರಿಹಾರ ನೀಡುವ ಕುರಿತು ಯಾವುದೇ ಗೈಡ್‌ಲೈನ್ ಇನ್ನೂ ಬಂದಿಲ್ಲ. ಗೈಡ್‌ಲೈನ್ ಆಧರಿಸಿ ಪರಿಹಾರ ನೀಡಲಾಗುವುದು ಎಂದರು.  ಹೊನ್ನಾಳಿ ತಾಲೂಕಿನಲ್ಲಿ 2 ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳದಲ್ಲಿ ನೀರು ನಿಂತು ಬೆಳೆ ನಾಶವಾಗಿದೆ. ನ್ಯಾಮತಿ ತಾಲೂಕಿನಲ್ಲಿ 35 ಗುಂಟೆ ಪ್ರದೇಶದಲ್ಲಿನ ಬಾಳೆ ಬೆಳೆ ನಾಶವಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.  ಅಧಿಕಾರಿಗಳು ಮಾನವೀಯತೆ ತೋರಬೇಕು: ಅತಿವೃಷ್ಠಿಯಿಂದ ಯಾವ ಮನೆಗಳು ಬಹುತೇಕ ಪೂರ್ಣಪ್ರಮಾಣದಲ್ಲಿ ಮನೆ ಹಾನಿಯಾಗಿಲ್ಲ. ಆದರೆ, ಶೇ. 40ಕ್ಕಿಂತ ಹೆಚ್ಚು ಮನೆಹಾನಿಯಾಗಿದ್ದರೆ ಅಂತಹ ಮನೆಗಳನ್ನು ಗ್ರಾಮಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಮಾನವೀಯತೆ ದೃಷ್ಟಿಯಿಂದ ಪೂರ್ಣಹಾನಿ ಎಂದು ಪರಿಗಣಿಸುವಂತೆ ಶಾಸಕರು ಮನವಿ ಮಾಡಿದರು.  ಅವಳಿ ತಾಲೂಕಿನಲ್ಲಿ ಒಟ್ಟು 38 ಗ್ರಾಮಲೆಕ್ಕಾಧಿಕಾರಿಗಳ ಹುದ್ದೆಗಳಿದ್ದು, ಅವುಗಳ ಪೈಕಿ ಕೇವಲ 30 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ 30 ಜನರ ಪೈಕಿ 6 ಜನ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮಲೆಕ್ಕಾಧಿಕಾರಿಗಳ ಕೊರತೆ ಇದ್ದು ನೇಮಕಾತಿ ಆಗಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವೆ ಎಂದರು.  ತಾಲೂಕು ಕಚೇರಿ ಸಭಾಂಗಣ ಮಳೆಯಿಂದ ಸೋರಿಕೆಯಾಗುತ್ತಿರುವುದನ್ನು ಕಂಡ ಶಾಸಕರು, ತಹಸೀಲ್ದಾರ್ ಅವರಿಗೆ ಎಂಜಿನಿಯರ್ ಕರೆಸಿ ಎಸ್ಟಿಮೇಟ್ ಮಾಡಿಸಿ ದುರಸ್ತಿ ಮಾಡುವಂತೆ ಸೂಚನೆ ನೀಡಿದರು.  ಜಿಲ್ಲಾಧಿಕಾರಿ ಸಭೆ:  ತಾಲೂಕಿನಲ್ಲಿನ ಅತಿವೃಷ್ಠಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನು ಮಂಗಳವಾರ ತಾಪಂ ಸಭಾಂಗಣದಲ್ಲಿ ನಡೆಸಲಿದ್ದಾರೆ.ಎಲ್ಲ್ಲ ಅಧಿಕಾರಿಗಳು ಹಾಜರಿದ್ದು ಅಂಕಿ ಅಂಶ ಸಹಿತ ಮಾಹಿತಿ ನೀಡಬೇಕು ಎಂದರು.   ನಂತರ ನೆರೆ ಪ್ರದೇಶ ಬಾಲರಾಜ್ ಘಾಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಉಪವಿಭಾಗಾಧಿಕಾರಿ ವಿ. ಅಭಿಷೇಕ್, ತಹಸೀಲ್ದಾರ್ ಪಟ್ಟರಾಜಗೌಡ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ತಾಪಂ ಇಒ ರಾಘವೇಂದ್ರ, ಗ್ರೇಡ್-2 ತಹಸೀಲ್ದಾರ್ ಸುರೇಶ್‌ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net