ಜಿಲ್ಲಾದ್ಯಂತ ‘ಹರ್ ಘರ್ ತಿರಂಗಾ’ ಅಭಿಯಾನ

dc_20240813235042692.jpg
Published on

ದಾವಣಗೆರೆ : ದೇಶದ 78ನೇ ಸ್ವಾತಂತ್ರೊೃೀತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ‘ಹರ್ ಘರ್ ತಿರಂಗಾ’ ಅಭಿಯಾನದಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಭಕ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಾತಂತ್ರೃ ಹೋರಾಟಗಾರರ ಕುರಿತು ಪ್ರಬಂಧ, ಆಶುಭಾಷಣ, ಚಿತ್ರಕಲೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.  ಎಲ್ಲ ತಾಲೂಕುಗಳಲ್ಲಿ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬುಧವಾರ ಬೆಳಗ್ಗೆ 6.30 ಕ್ಕೆ ಜಿಲ್ಲಾಡಳಿತ ಭವನದಿಂದ ಜಿಲ್ಲಾ ಕ್ರೀಡಾಂಗಣದ ವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಪಿಬಿ ರಸ್ತೆ, ಎವಿಕೆ ಕಾಲೇಜು ರಸ್ತೆಯ ಮೂಲಕ ಸಾಗಿ ಜಿಲ್ಲಾ ಕ್ರೀಡಾಂಗಣ ತಲುಪಲಾಗುವುದು. ಆಸಕ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.  ಸಂಜೆ 4.30 ರಿಂದ ‘ತಿರಂಗಾ ಮ್ಯಾರಥಾನ್’ ನಗರದ ಹೈಸ್ಕೂಲ್ ಮೈದಾನದಿಂದ ಜಯದೇವ ವೃತ್ತ, ಹದಡಿ ರಸ್ತೆ ಮೂಲಕ ಜಿಲ್ಲಾ ಕ್ರೀಡಾಂಗಣ ತಲುಪಲಿದೆ ಎಂದರು.  ವಿದ್ಯಾರ್ಥಿಗಳು, ಸಾರ್ವಜನಿಕರು ರಾಷ್ಟ್ರ ಧ್ವಜದೊಂದಿಗೆ ಸೆಲ್ಫಿ ಪಡೆದು ಚ್ಟಜಚ್ಟಠಿಜ್ಟಿಚ್ಞಜ.್ಚಟಞ ನಲ್ಲಿ ಅಪ್‌ಲೋಡ್ ಮಾಡಲು ಎಲ್ಲ ತಾಲೂಕು ಆಡಳಿತದಿಂದ ಸೆಲ್ಫಿ ಪಾಯಿಂಟ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.  ಮಹಾನಗರ ಪಾಲಿಕೆ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ತಿರಂಗಾ ಮ್ಯಾರಥಾನ್, ತಿರಂಗಾ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ಬೀದಿ ಬದಿ ವ್ಯಾಪಾರಸ್ಥರು, ಸಾರ್ವಜನಿಕರು, ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.  ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆ, ದಾವಣಗೆರೆ ಗಾಜಿನ ಮನೆಯಲ್ಲಿ ಮಂಗಳವಾರದಿಂದ ಗುರುವಾರದ ವರೆಗೆ ಸೆಲ್ಫಿ ವಿತ್ ತಿರಂಗಾ ಪಾಯಿಂಟ್, ಪ್ರತಿ ದಿನ ಸಂಜೆ ಸಂಗೀತ ಕಾರಂಜಿ ಏರ್ಪಡಿಸಲಾಗಿದೆ. ಸಾರ್ವಜನಿಕರು ಭೇಟಿ ನೀಡುವಂತೆ ಕೋರಿದರು.  ಕೆಎಸ್‌ಆರ್‌ಟಿಸಿ ವತಿಯಿಂದ 400 ಕ್ಕೂ ಅಧಿಕ ಬಸ್‌ಗಳ ಮೇಲೆ ‘ಹರ್ ಘರ್ ತಿರಂಗಾ’ ಅಭಿಯಾನದ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ತಮ್ಮ ಮೊಬೈಲ್ ವಾಟ್ಸಾಪ್ ಡಿ.ಪಿ.ಯಲ್ಲಿ ರಾಷ್ಟ್ರಧ್ವಜದ ಛಾಯಾಚಿತ್ರವನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.  ಸಾರ್ವಜನಿಕರು ಮನೆಗಳ ಮೇಲೆ ಧ್ವಜ ಹಾರಿಸುವ ಸಂದರ್ಭದಲ್ಲಿ ವಿದ್ಯುತ್ ಕಂಬಗಳಿದ್ದರೆ ಎಚ್ಚರಿಕೆ ವಹಿಸಬೇಕು. ಧ್ವಜವು ಮಳೆಯಲ್ಲಿ ಒದ್ದೆಯಾಗದಂತೆ ನೋಡಿಕೊಳ್ಳಬೇಕು. ವಾಹನಗಳ ಮೇಲೆ ಧ್ವಜ ಕಟ್ಟುವಾಗ ಎತ್ತರದಲ್ಲಿ ಇರಲಿ. ಧ್ವಜದ ಗೌರವ ಕಾಪಾಡಬೇಕು ಎಂದು ತಿಳಿಸಿದರು.  ...  (ಬಾಕ್ಸ್)  ತಾಲೂಕು ಕಚೇರಿ ಶೀಘ್ರ ಸ್ಥಳಾಂತರ  ಎಪಿಎಂಸಿ ರೈತ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕು ಕಚೇರಿಯನ್ನು ಗಡಿಯಾರ ಕಂಬದ ಬಳಿ ನಿರ್ಮಿಸಲಾಗಿರುವ ನೂತನ ಕಟ್ಟಡಕ್ಕೆ ಶೀಘ್ರವೇ ಸ್ಥಳಾಂತರಿಸಲಾಗುವುದು ಎಂದು ಡಿಸಿ ಗಂಗಾಧರಸ್ವಾಮಿ ತಿಳಿಸಿದರು.  ಈ ವಿಷಯವನ್ನು ಕಂದಾಯ ಸಚಿವರು, ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇವೆ. ಹೊಸ ಕಟ್ಟಡದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಬೇಕಿದ್ದು ಅದಕ್ಕಾಗಿ 80 ಲಕ್ಷ ರೂ. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಹಣ ಬಿಡುಗಡೆಯಾದ ಒಂದು ತಿಂಗಳೊಳಗೆ ಕಚೇರಿ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.  ಕಟ್ಟಡ ನಿರ್ಮಾಣವಾಗಿ ಒಂದೂವರೆ ವರ್ಷವಾಗಿದ್ದು ನಿರ್ವಹಣೆಯಾಗಿಲ್ಲ. ಕಟ್ಟಡದಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯಗಳು ಆಗಬೇಕಿದೆ. ಲೋಪಗಳ ಬಗ್ಗೆ ಗುತ್ತಿಗೆದಾರನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.  ಭದ್ರಾ ಅಚ್ಚುಕಟ್ಟಿನ ಕೊನೆಯ ಭಾಗಕ್ಕೆ ನೀರು ತಲುಪದಿರುವ ಬಗ್ಗೆ ಪ್ರತಿಕ್ರಿಯಿಸಿ, ಜಿ.ಪಂ. ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ 630 ಕಿ.ಮೀ. ಉಪ ಕಾಲುವೆಗಳ ಹೂಳೆತ್ತಲಾಗಿದೆ. ಆದರೆ ಮುಖ್ಯ ನಾಲೆಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಭದ್ರಾ ಇಂಜಿನಿಯರುಗಳ ಸಭೆ ಕರೆದು ಈ ಬಗ್ಗೆ ನಿರ್ದೇಶನ ನೀಡಲಾಗಿದೆ. ಕೆಲಸ ಮಾಡಿಸಲಾಗುವುದು. ನಾಲೆಗಳಿಗೆ ಹರಿಸುವ ನೀರನ್ನು ಹೆಚ್ಚು ರಭಸವಾಗಿ ಬಿಡುವಂತೆ ಕೇಳಿಕೊಂಡಿದ್ದೇವೆ ಎಂದರು.  ಇತ್ತೀಚೆಗೆ ಭದ್ರಾ ಮತ್ತು ತುಂಗಾ ಜಲಾಶಯಗಳಿಂದ ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಉಂಟಾದ ಪ್ರವಾಹದಿಂದ 42 ಹೆಕ್ಟೇರ್ ಕೃಷಿ ಬೆಳೆ, 7 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.  ...    (ಕೋಟ್)  ಗ್ರಾ.ಪಂ.ಗಳ ವ್ಯಾಪ್ತಿಯಲ್ಲೂ ‘ಹರ್ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗ್ರಾ.ಪಂ. ಗ್ರಂಥಾಲಯಗಳಲ್ಲಿ ತ್ರಿವರ್ಣ ಧ್ವಜ ಮತ್ತು ಬ್ಯಾಡ್ಜ್‌ಗಳನ್ನು ತಯಾರಿಸುವ ಚಟುವಟಿಕೆ ನಡೆಯುತ್ತಿದೆ. ‘ಸಂವಿಧಾನ ಓದು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ. 15ರಂದು ಜಿಲ್ಲೆಯ ಅಮೃತ ಸರೋವರಗಳ ದಡದಲ್ಲಿ ಧ್ವಜಾರೋಹಣ ಮಾಡಲಾಗುವುದು.   ಸುರೇಶ್ ಬಿ. ಇಟ್ನಾಳ್, ಜಿಪಂ ಸಿಇಒ  ...    (ಕೋಟ್)  ಜಿಲ್ಲೆಯ 24 ಪೊಲೀಸ್ ಠಾಣೆಗಳಲ್ಲೂ ರಾಷ್ಟ್ರಧ್ವಜ ಹಾರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಗರಿಕರು ಧ್ವಜ ಸಂಹಿತೆಯನ್ನು ಪಾಲಿಸಬೇಕು. ಹರ್ ಘರ್ ತಿರಂಗಾ ಡಾಟ್ ಕಾಮ್‌ನಲ್ಲಿ ಸಾರ್ವಜನಿಕರು ಸೆಲ್ಫಿ ಅಪ್‌ಲೋಡ್ ಮಾಡಲು ಮನವಿ.   ಉಮಾ ಪ್ರಶಾಂತ್, ಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net