ಮೀನುಗಾರಿಕೆಗೆ ಆಶಾದಾಯಕ ಮುಂಗಾರು?

dvg-fish-2.jpg
Published on

ರಮೇಶ ಜಹಗೀರದಾರ್ ದಾವಣಗೆರೆ  : ಮುಂಗಾರು ಆರಂಭವಾಗಿದ್ದು ಉತ್ತಮ ಮಳೆಯಾಗಿ ಕೆರೆಗಳು ತುಂಬುವ ನಿರೀಕ್ಷೆಯೊಂದಿಗೆ ಮೀನುಗಾರಿಕೆ ಇಲಾಖೆ ಪ್ರಸ್ತುತ ಸಾಲಿನ ಚಟುವಟಿಕೆಗಳ ಸಿದ್ಧತೆಯಲ್ಲಿ ತೊಡಗಿದೆ. ಈ ವರ್ಷ 27,600 ಟನ್ ಮೀನು ಮರಿಗಳ ಉತ್ಪಾದನೆಯ ಗುರಿಯನ್ನು ಹೊಂದಿದೆ.  ಜಿಲ್ಲೆಯಲ್ಲಿ ಇಲಾಖೆಯಿಂದ ವಿಲೇವಾರಿ ಮಾಡುವ 94 ಕೆರೆಗಳಿವೆ. ಅವುಗಳಲ್ಲಿ 55 ಕೆರೆಗಳು ಏತ ನೀರಾವರಿ ವ್ಯಾಪ್ತಿಗೆ ಒಳಪಟ್ಟಿವೆ. ಈ ವರ್ಷ 55 ಕೆರೆಗಳಿಗೆ ಇ-ಟೆಂಡರ್ ಮೂಲಕ ಹರಾಜು ಮಾಡುವ ಗುರಿ ಇದ್ದು 7 ಕೆರೆಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ.  ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 197 ಕೆರೆಗಳಿವೆ. ಆಯಾ ಗ್ರಾ.ಪಂ.ಗಳೇ ಅವುಗಳ ಹರಾಜು ಇನ್ನಿತರ ಪ್ರಕ್ರಿಯೆಗಳನ್ನು ಮಾಡುತ್ತವೆ. ಅದರಿಂದ ಬರುವ ಆದಾಯ ಗ್ರಾ.ಪಂ.ಗಳಿಗೇ ಸೇರುತ್ತದೆ.  ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳಿವೆ. 15 ಸಾವಿರದಷ್ಟು ಅವರ ಜನಸಂಖ್ಯೆ ಇದೆ. 18 ಮೀನುಗಾರರ ಸಹಕಾರ ಸಂಘಗಳಿವೆ. ಹರಿಹರ ತಾಲೂಕು ಕೊಂಡಜ್ಜಿ ಮತ್ತು ಚನ್ನಗಿರಿ ತಾಲೂಕು ಸೂಳೆಕೆರೆ ಬಳಿ ಮೀನುಮರಿ ಪಾಲನಾ ಕೇಂದ್ರಗಳಿವೆ. ಹೊನ್ನಾಳಿ ಮತ್ತು ಜಗಳೂರು ತಾಲೂಕು ಮಟ್ಟದ ನರ್ಸರಿಗಳಿವೆ.  ಸಾಮಾನ್ಯವಾಗಿ ಜೂನ್‌ನಿಂದ ಆಗಸ್ಟ್ ವರೆಗೆ ಮೀನುಗಾರಿಕೆಗೆ ಸೀಸನ್. ಮಳೆಯಾಗಿ ಕೆರೆಕಟ್ಟೆಗಳು ತುಂಬಿದರೆ ಮೀನು ಬಿತ್ತನೆಗೆ ಸಕಾಲ. ಅದಕ್ಕಾಗಿ ಮೀನುಗಾರರು ಕಾಯುತ್ತಿದ್ದಾರೆ.  ...  

.....

27,600 ಟನ್ ಉತ್ಪಾದನೆ ಗುರಿ  

ಕಳೆದ ವರ್ಷ (2024-25) ಜಿಲ್ಲೆಯಲ್ಲಿ 46,300 ಟನ್ ಮೀನು ಉತ್ಪಾದನೆಯ ಗುರಿ ಹೊಂದಲಾಗಿತ್ತು. 25,720 ಟನ್‌ನಷ್ಟು ಉತ್ಪಾದನೆಯಾಗಿದೆ.  ಈ ವರ್ಷ (2025-26) 27,600 ಟನ್ ಉತ್ಪಾದಿಸುವ ಗುರಿ ಇದೆ. ದಾವಣಗೆರೆ ತಾಲೂಕಿನಲ್ಲಿ 5700 ಟನ್, ಹರಿಹರ-3950 ಟನ್, ಹೊನ್ನಾಳಿ-4050 ಟನ್, ನ್ಯಾಮತಿ-3600 ಟನ್, ಚನ್ನಗಿರಿ-5920 ಟನ್, ಜಗಳೂರು ತಾಲೂಕಿನಲ್ಲಿ 4380 ಟನ್ ಮೀನು ಉತ್ಪಾದಿಸುವ ಗುರಿಯನ್ನು ಇಲಾಖೆ ಹೊಂದಿದೆ. ಇಲಾಖೆಯ ಕೆರೆಗಳಿಗೆ ಪ್ರಸ್ತುತ ಸಾಲಿನಲ್ಲಿ 1.25 ಕೋಟಿ ಮೀನು ಮರಿಗಳನ್ನು ಬಿಡುವ ಗುರಿ ಇದೆ.

 ...

ಮತ್ಸೃ ಆಶ್ರಯ ಮನೆ ಮಂಜೂರು  

ಮತ್ಸೃ ಆಶ್ರಯ ಯೋಜನೆಯಡಿ ಜಿಲ್ಲೆಯ ಮೀನುಗಾರರಿಗೆ 175 ಮನೆಗಳು ಮಂಜೂರಾಗಿವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಮನೆಗಳಂತೆ 7 ಕ್ಷೇತ್ರಗಳ ಫಲಾನುಭವಿಗಳಿಗೆ ಸೂರು ದೊರೆಯಲಿದೆ.  ಈ ಯೋಜನೆಯು ನಿವೇಶನ ಇದ್ದವರಿಗೆ ಮಾತ್ರ ಅನ್ವಯವಾಗಲಿದೆ. ಮನೆ ನಿರ್ಮಿಸಿಕೊಳ್ಳಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1.20 ಲಕ್ಷ ರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 1.75 ಲಕ್ಷ ರೂ. ನೀಡಲಾಗುತ್ತದೆ.  ಶಾಸಕರ ಅಧ್ಯಕ್ಷತೆಯಲ್ಲಿ ಮೂರು ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಆಸಕ್ತ ಮೀನುಗಾರರು ತಮ್ಮ ವ್ಯಾಪ್ತಿಯ ಸಹಾಯಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

 ...  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net