

ದಾವಣಗೆರೆ : ನಗರದ ಕಾಯಿಪೇಟೆಯ ಮನೆಯೊಂದರಲ್ಲಿ ಮಂಗಳವಾರ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ದುರಂತದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ವಿಮಲಾಬಾಯಿ (73) ಮತ್ತು ಕುಮಾರ್ ಪಾಲ್ ಜೈನ್ (34) ಮೃತಪಟ್ಟವರು. ದಟ್ಟ ಹೊಗೆ ಆವರಿಸಿ ಉಸಿರುಗಟ್ಟಿದ್ದರಿಂದ ಸಾವು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಮುಖಂಡ ರುದ್ರಮುನಿ ಸ್ವಾಮಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಒಟ್ಟು 6 ಜನ ವಾಸವಾಗಿದ್ದರು. ಒಂದು ಕೋಣೆಯಲ್ಲಿ ವಿಮಲಾಬಾಯಿ ಮತ್ತು ಕುಮಾರ್ ಇದ್ದರು. ಮತ್ತೊಂದು ಕೊಠಡಿಯಲ್ಲಿ ರುದ್ರಮುನಿ ಸ್ವಾಮಿ, ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದರು. ಬೆಳಗಿನ ಜಾವ ಮೂರೂವರೆ ಸುಮಾರು ದುರಂತ ಸಂಭವಿಸಿರುವ ಸಾಧ್ಯತೆ ಇದೆ. ಮನೆಯ ಹಾಲ್‌ನಲ್ಲಿ ಇಡಲಾಗಿದ್ದ ಫಿಶ್ ಟ್ಯಾಂಕ್‌ಗೆ ಫ್ಲೆಕ್ಸ್ ಬಾಕ್ಸ್ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಬಹುಶಃ ಫ್ಲೆಕ್ಸ್ ಬಾಕ್ಸ್ ಬಿಸಿಯಾಗಿ ಅದರಲ್ಲಿ ಕಿಡಿ ಕಾಣಿಸಿಕೊಂಡಿದೆ. ಸುತ್ತಲೂ ಇದ್ದ ಸೋಫಾ ಸೆಟ್ ಇನ್ನಿತರ ಪೀಠೋಪಕರಣ, ಸೀಲಿಂಗ್, ಎಸಿ ಇನ್ನಿತರ ವಸ್ತುಗಳಿಗೆ ಬೆಂಕಿ ಹತ್ತಿಕೊಂಡಿದೆ. ಪರಿಣಾಮವಾಗಿ ಮನೆಯ ತುಂಬ ದಟ್ಟವಾದ ಹೊಗೆ ಆವರಿಸಿದೆ. ಎಲ್ಲರೂ ನಿದ್ದೆಯ ಮಂಪರಿನಲ್ಲಿದ್ದಾಗ ದುರಂತ ಸಂಭವಿಸಿದೆ. ಒಂದು ಹಂತದಲ್ಲಿ ರುದ್ರಮುನಿ ಸ್ವಾಮಿ ಅವರ ಕೋಣೆಯೊಳಗೆ ಹೊಗೆ ಆವರಿಸಿ ವಾಸನೆ ಬಂದಾಗ ಎಚ್ಚರಗೊಂಡಿದ್ದಾರೆ. ಮುಂಬಾಗಿಲ ಕಡೆಗೆ ಹೋಗಲು ಸಾಧ್ಯವಾಗದಷ್ಟು ಹೊಗೆ ಆವರಿಸಿತ್ತು. ಆದ್ದರಿಂದ ಹಿಂಬಾಗಿಲಿನಿಂದ ನಾಲ್ಕೂ ಮಂದಿ ಪಾರಾಗಿ ಹೊರ ಬಂದಿದ್ದಾರೆ. ಅವರಿಗೆ ಯಾವುದೇ ತೊಂದರೆಯಾಗಿಲ್ಲ. ನಂತರ ಅವರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಆದರೆ ಇನ್ನೊಂದು ಕೋಣೆಯಲ್ಲಿದ್ದ ವಿಮಲಾಬಾಯಿ ಮತ್ತು ಕುಮಾರ್ ಅವರಿಗೆ ಹೊರ ಬರಲು ಸಾಧ್ಯವಾಗಿಲ್ಲ. ಉಸಿರುಗಟ್ಟಿದಂತಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇಬ್ಬರೂ ಕುಸಿದು ಬಿದ್ದಿದ್ದಾರೆ. ಅಷ್ಟು ಹೊತ್ತಿಗೆ ಅಗ್ನಿಶಾಮಕ ದಳದವರೂ ಬಂದು ಕಾರ್ಯಾಚರಣೆ ನಡೆಸಿ ತಕ್ಷಣ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟು ಹೊತ್ತಿಗೆ ಇಬ್ಬರೂ ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೂರ್ವ ವಲಯ ಐಜಿಪಿ ಡಾ. ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿದ್ದರು.