

ದಾವಣಗೆರೆ ನಗರದ ಗುಂಡಿ ವೃತ್ತದ ಬಳಿ ನಿಲ್ಲಿಸಿದ್ದ ಓಮ್ನಿ ವ್ಯಾನ್, ಶುಕ್ರವಾರ ರಾತ್ರಿ ಎಲ್‌ಪಿಜಿ ಸೋರಿಕೆಯಿಂದ ಹೊತ್ತಿ ಉರಿದಿದೆ. ಮೋತಿ ವೀರಪ್ಪ ಕಾಲೇಜು ಸಮೀಪ ಬೆಣ್ಣೆ ಪಡ್ಡು ಮಾರಾಟ ಮಾಡುತ್ತಿದ್ದ ಪುಷ್ಪಾ ವಿಜಯಕುಮಾರ್ ಎಂಬುವರ ವಾಹನ ಇದಾಗಿದೆ. ಶುಕ್ರವಾರ ರಾತ್ರಿ ವ್ಯಾಪಾರ ಮುಗಿಸಿ ಕಾಲೇಜು ಆವರಣದಲ್ಲಿದ್ದ ಓಮ್ನಿಗೆ ಪರಿಕರಗಳನ್ನು ತುಂಬಿದ್ದಾರೆ. ಚಾಲಕ ವಾಹನ ಚಾಲನೆಗೆ ಮುಂದಾದಾಗ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಇದು ವಾಹನವನ್ನು ವ್ಯಾಪಿಸಿಕೊಂಡಿದೆ. ಚಾಲಕ ವಾಹನದಿಂದ ಕೆಳಗೆ ಇಳಿದು ಅಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ಸಾಗುತ್ತಿದ್ದ ಸಾರ್ವಜನಿಕರೊಬ್ಬರು ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕೆಲ ಹೊತ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಆದರೆ, ಎಲ್‌ಪಿಜಿ ಸೋರಿಕೆಯನ್ನು ತಡೆಯಲು ಸಾಧ್ಯವಾಗಿಲ್ಲ. ಸಿಲಿಂಡರ್ ಖಾಲಿಯಾಗುವ ವರೆಗೂ ಕಾದು ಅನಾಹುತ ತಪ್ಪಿಸಿದ್ದಾರೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.