

ರಮೇಶ ಜಹಗೀರದಾರ್ ದಾವಣಗೆರೆ : ಅವಧಿ ಮುಗಿದ ವಾಹನಗಳನ್ನು ಬಳಸುವಂತಿಲ್ಲ ಎಂಬ ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗ್ನಿಶಾಮಕ ಠಾಣೆಯ ವಾಹನಗಳು ಒಂದೊಂದಾಗಿ ಸ್ಥಗಿತವಾಗುತ್ತಿವೆ. ಬೇಸಿಗೆ ಸಮೀಪಿಸಿದ್ದು ಬೆಂಕಿ ದುರಂತಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಸುಸಜ್ಜಿತವಾಗಿರಬೇಕಾದ ಇಲಾಖೆಯ ಸಿಬ್ಬಂದಿಗೆ ಪರಿಸ್ಥಿತಿ ಎದುರಿಸುವುದು ಸವಾಲಾಗಿದೆ. ಹಾವೇರಿ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ದಾವಣಗೆರೆ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 18 ಅಗ್ನಿಶಾಮಕ ಠಾಣೆಗಳಿದ್ದು, ವಯಸ್ಸಾಗಿರುವ (15 ವರ್ಷ ಮೀರಿದವು) 8 ರಿಂದ 9 ವಾಹನಗಳು ಈಗಾಗಲೇ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಒಂದೆರಡು ತಿಂಗಳಲ್ಲಿ ಇನ್ನೂ ಮೂರು ವಾಹನಗಳು ಮೂಲೆ ಸೇರಲಿವೆ. ಬಹುತೇಕ ಜಿಲ್ಲೆಗಳಲ್ಲೂ ಇದೇ ಚಿತ್ರಣವಿದೆ. ರಾಜ್ಯದಲ್ಲಿ 220 ಕ್ಕೂ ಹೆಚ್ಚು ಅಗ್ನಿಶಾಮಕ ಠಾಣೆಗಳಿದ್ದು 80 ರಿಂದ 120 ಗಾಡಿಗಳು ಇದೇ ಕಾರಣಕ್ಕೆ ಉಪಯೋಗಿಸದಂತಾಗಿವೆ. ಪ್ರತಿ ಠಾಣೆಗೆ ಕನಿಷ್ಠ 2 ವಾಹನಗಳು ಇರಬೇಕು. ಕೆಲವು ಠಾಣೆಗಳಲ್ಲಿ ಒಂದೊಂದು ವಾಹನಗಳ ಅವಧಿ ಮುಕ್ತಾಯವಾಗಿದೆ. ಹೀಗೇ ಮುಂದುವರಿದರೆ ಬೆಂಕಿ ನಂದಿಸುವ ಕಾರ್ಯ ಕಷ್ಟವಾಗಲಿದೆ. ಫೆ. 10 ರಿಂದ ಬೆಂಗಳೂರಿನಲ್ಲಿ ಆರಂಭವಾಗುವ ವೈಮಾನಿಕ ಪ್ರದರ್ಶನಕ್ಕೆ ಅಗ್ನಿಶಾಮಕ ವಾಹನಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ಪಡೆಯಬೇಕಾಗಿದೆ. ತುರ್ತು ಸಂದರ್ಭಗಳಿಗೇ ವಾಹನವಿಲ್ಲದಂತಾಗಿದ್ದು, ಏರ್ ಶೋಗೆ ಹೇಗೆ ಹೊಂದಿಸಬೇಕು ಎನ್ನುವ ತಲೆನೋವು ಅಧಿಕಾರಿಗಳಿಗೆ ಶುರುವಾಗಿದೆ. ತುರ್ತು ಸಂದರ್ಭಗಳಲ್ಲಿ ಅವಶ್ಯಕವಾಗಿರುವ ಅಗ್ನಿಶಾಮಕ ವಾಹನಗಳಿಗೆ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಯಸ್ಸಾದ ವಾಹನಗಳ ಬಳಕೆಯನ್ನು ಕೇಂದ್ರ ಒಪ್ಪುತ್ತಿಲ್ಲ. ಪರ್ಯಾಯ ವ್ಯವಸ್ಥೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನು ಮನಗಂಡು ರಾಜ್ಯ ಸರ್ಕಾರ ನೂರು ವಾಹನಗಳನ್ನು ಒದಗಿಸಲು ಪ್ರಕ್ರಿಯೆ ಆರಂಭಿಸಿದೆ. ಅವುಗಳ ಫ್ಯಾಬ್ರಿಕೇಶನ್ ಕೆಲಸ ಪ್ರಗತಿಯಲ್ಲಿದೆ. ಎಲ್ಲವೂ ಸಿದ್ಧಗೊಂಡು ಠಾಣೆಗಳನ್ನು ತಲುಪುವುದಕ್ಕೆ ಕನಿಷ್ಠ 6 ತಿಂಗಳಾದರೂ ಬೇಕಾಗಬಹುದು. ಅಕ್ಟೋಬರ್ ತಿಂಗಳ ವರೆಗೂ ಹೇಗೋ ಹೊಂದಾಣಿಕೆ ಮಾಡಿಕೊಂಡು ಕಾರ್ಯಾಚರಣೆ ನಡೆಸಬೇಕಾಗಿದೆ ಎನ್ನುತ್ತವೆ ಮೂಲಗಳು. ... (ಬಾಕ್ಸ್) ಸರಿದೂಗಿಸುವ ಸರ್ಕಸ್ ಹಾವೇರಿ ಜಿಲ್ಲೆಯಲ್ಲಿ 7 ಅಗ್ನಿಶಾಮಕ ಠಾಣೆಗಳಿವೆ. ಶಿಗ್ಗಾಂವಿಯಲ್ಲಿ ಒಂದು ವಾಹನದ ಅವಧಿ ಫೆ. 15ಕ್ಕೆ ಮುಕ್ತಾಯವಾಗಲಿದೆ. ಚಿತ್ರದುರ್ಗದಲ್ಲಿ 1, ಹಿರಿಯೂರಿನಲ್ಲಿ 1 ವಾಹನ ಮಾರ್ಚ್‌ನಲ್ಲಿ ಸ್ಥಗಿತಗೊಳ್ಳಲಿವೆ. ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಇದ್ದ 3 ರಲ್ಲಿ ಒಂದು ವಾಹನ ಅನುಪಯುಕ್ತವಾಗಿದೆ. ಚನ್ನಗಿರಿಯಲ್ಲಿ 2 ವಾಹನಗಳಿದ್ದು ಒಂದರ ಅವಧಿ ಮುಕ್ತಾಯವಾಗಿದೆ. ಕಳೆದ ಒಂದು ವರ್ಷದಿಂದ ವಾಹನಗಳ ಸಂಖ್ಯೆ ಇಳಿಮುಖ ಆಗುತ್ತಲೇ ಇದೆ. ತಾಲೂಕುಗಳಲ್ಲಿ ವಾಹನ ಕೊರತೆ ಉಂಟಾದಾಗ ಜಿಲ್ಲಾ ಕೇಂದ್ರದ ಹೆಚ್ಚುವರಿ ವಾಹನಗಳಲ್ಲಿ ಅಲ್ಲಿಗೆ ಕಳಿಸಿ ಸರಿದೂಗಿಸಬೇಕಾಗಿದೆ. ಇನ್ನೂ ಅನಿವಾರ್ಯವಾದರೆ ನೆರೆಹೊರೆಯ ಜಿಲ್ಲೆಗಳಿಂದ ಕರೆಸಬೇಕಾಗುತ್ತದೆ. ಒಂದೇ ಬಾರಿಗೆ ಎರಡು ಕರೆ ಬಂದರೆ ಹೇಗೆ ನಿಭಾಯಿಸುವುದು ಎನ್ನುವ ಪ್ರಶ್ನೆಯೂ ಇದೆ. ... (ಬಾಕ್ಸ್) ತುರ್ತು ಸಂದರ್ಭಗಳು ಅರಣ್ಯ, ಬಣವೆ, ಕಬ್ಬಿನ ಗದ್ದೆಗೆ ಬೆಂಕಿ, ಅಡುಗೆ ಅನಿಲ ಸಿಲಿಂಡರ್ ಸ್ಫೋಟ, ವಿದ್ಯುತ್ ಅವಘಡ, ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತ, ನದಿಯಲ್ಲಿ ಮುಳುಗಿದ ಪ್ರಸಂಗ, ಕಟ್ಟಡ ಕುಸಿತ ಇನ್ನಿತರ ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಬೇಕು. ಗಣ್ಯರು ಭೇಟಿ ನೀಡಿದಾಗಲೂ ಸನ್ನದ್ಧವಾಗಿ ಇರಬೇಕಾಗುತ್ತದೆ. ... (ಕೋಟ್) ವಾಹನಗಳ ಅವಧಿ ಮುಕ್ತಾಯವಾದ ಕಾರಣ ಒಂದೊಂದೇ ಗಾಡಿಗಳು ನಿಲ್ಲುತ್ತಿವೆ. ಬೇಸಿಗೆಯಲ್ಲಿ ಬೆಂಕಿ ಅವಘಡಗಳು ಜಾಸ್ತಿ ಇರುವುದರಿಂದ ನಿಭಾಯಿಸುವುದು ಕಷ್ಟವಾಗಲಿದೆ. ಆದರೂ ಇರುವ ವಾಹನಗಳನ್ನೇ ಹೊಂದಾಣಿಕೆ ಮಾಡಿಕೊಂಡು ಕಾರ್ಯಾಚರಣೆ ನಡೆಸುತ್ತೇವೆ. ಎಂ.ಎನ್. ನಾಗೇಶ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ದಾವಣಗೆರೆ