

ದಾವಣಗೆರೆ : ನಗರದ ಹೊಂಡದ ರಸ್ತೆಯ ಮೀನು ಮಾರುಕಟ್ಟೆ ಪಕ್ಕದ ಮನೆಯೊಂದರಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಒಳಗೆ ಸಿಕ್ಕಿ ಹಾಕಿಕೊಂಡಿದ್ದ ತಾಯಿ ಮತ್ತು ಮಗಳನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಎರಡನೇ ಮಹಡಿಯಲ್ಲಿದ್ದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿದೆ. ಮನೆಯಲ್ಲಿದ್ದ ಗೀತಾ ಮತ್ತು ಮಧು ಎಂಬುವರು ಹೊರಗೆ ಬರಲು ಆಗದೇ ಕಿಟಕಿಯ ಬಳಿ ನಿಂತುಕೊಂಡಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಏಣಿಯನ್ನು ಬಳಸಿ, ಮನೆಯೊಳಗೆ ಸಿಲುಕಿಕೊಂಡಿದ್ದ ತಾಯಿ ಮತ್ತು ಮಗಳನ್ನು ಕಿಟಕಿಯ ಮೂಲಕ ಹೊರಗೆ ಕರೆತಂದರು. ಹೊಗೆ ಸೇವಿಸಿದ್ದರಿಂದ ಅಸ್ವಸ್ಥಗೊಂಡಿದ್ದ ಇಬ್ಬರಿಗೂ ಆರೈಕೆ ಮಾಡಲಾಯಿತು. ಘಟನೆಯಲ್ಲಿ ಗೃಹಬಳಕೆಯ ವಸ್ತುಗಳು, ಮಕ್ಕಳ ಪುಸ್ತಕ, ದಾಖಲಾತಿಗಳು ಸುಟ್ಟಿವೆ. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಎನ್. ನಾಗೇಶ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಾಲಿಂಗಪ್ಪ ಲಂಗೋಟಿ, ಅಗ್ನಿಶಾಮಕ ಠಾಣಾಧಿಕಾರಿ ಫಕೀರಪ್ಪ ಕೆ. ಉಪ್ಪಾರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.