ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪಾಲಿಕೆ ಸದಸ್ಯರು, ಆಯುಕ್ತೆ ಭೇಟಿ

dvg-fire-15.jpg
Published on

ದಾವಣಗೆರೆ : ನಗರದ ತ್ಯಾಜ್ಯ ಒ ವಿಲೇವಾರಿ ಘಟಕಕ್ಕೆ ಪಾಲಿಕೆ ಸದಸ್ಯರು ಹಾಗೂ ಆಯುಕ್ತೆ ರೇಣುಕಾ ಅವರನ್ನು ಒಳಗೊಂಡ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
 ಮೇಯರ್ ವಿನಾಯಕ ಪೈಲ್ವಾನ್, ಸದಸ್ಯರಾದ ಕೆ. ಚಮನ್ ಸಾಬ್, ಸೋಗಿ ಶಾಂತಕುಮಾರ್, ಮೀನಾಕ್ಷಿ ಜಗದೀಶ್, ಪ್ರತಿಪಕ್ಷ ನಾಯಕ ಪ್ರಸನ್ನಕುಮಾರ್, ಇಟ್ಟಿಗುಡಿ ಮಂಜುನಾಥ್, ಜಗದೀಶ್ ತಂಡದಲ್ಲಿದ್ದರು.
 ಈ ವೇಳೆ ಆಯುಕ್ತೆ ರೇಣುಕಾ ಮಾತನಾಡಿ, 33 ಎಕರೆ ಜಾಗದ ಪೈಕಿ ಸದ್ಯಕ್ಕೆ 13 ಎಕರೆ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಕಾರ್ಯ ನಿರ್ವಹಿಸುತ್ತಿದೆ. ಮೇ 2ರಂದು ತ್ಯಾಜ್ಯಕ್ಕೆ ಬೆಂಕಿ ಬಿದ್ದಿದ್ದು, ಪಾಲಿಕೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಜತೆಗೂಡಿ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
 ಆರಂಭದಲ್ಲಿ ಮೂರು ಕಡೆಗಳಲ್ಲಿ ಪೈಪ್‌ಲೈನ್ ಮೂಲಕ ನೀರು ಹಾಯಿಸಿದರೂ ಸಾಕಾಗದ ಕಾರಣ ಮತ್ತೆ ಎರಡು ಕಡೆಗಳಲ್ಲಿ ಪೈಪ್‌ಲೈನ್ ಮೂಲಕ ನೀರು ಹಾಯಿಸಿ ಬೆಂಕಿ ಶಮನ ಮಾಡಲಾಗುತ್ತಿದೆ ಎಂದು ತಿಳಿಸಿದರು.
 ಘನತ್ಯಾಜ್ಯ ವಿಲೇವಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅನುದಾನಕ್ಕೆ ಅನುಮತಿ ಪಡೆಯಲಾಗುವುದು. ಡಂಪಿಂಗ್ ಯಾರ್ಡ್ ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂಬುದು ಗ್ರಾಮಸ್ಥರ ಅಳಲು. ಮುಂಬರುವ ದಿನಗಳಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net