

ದಾವಣಗೆರೆ : ಸನ್ ಆಫ್ ಮುತ್ತಣ್ಣ ಚಲನಚಿತ್ರವು ಆ. 22 ರಂದು ತೆರೆ ಕಾಣಲಿದೆ ಎಂದು ನಟ ರಂಗಾಯಣ ರಘು ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಪಾಲಕರು ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎನ್ನುವ ಸಂದೇಶ ಈ ಚಿತ್ರದಲ್ಲಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಿ ವಿದೇಶಕ್ಕೆ ಕಳಿಸಬೇಕು ಎಂಬ ಭಾವನೆ ಪಾಲಕರಲ್ಲಿರುವುದು ಸಹಜ. ಅದರ ಜತೆಗೆ ಮಕ್ಕಳಿಗೆ ಹಿರಿಯರೊಂದಿಗೆ ಬಾಂಧವ್ಯ ಬೆಸೆಯಬೇಕು. ಕೌಟುಂಬಿಕ ಸಂಬಂಧಗಳನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು. ಮಕ್ಕಳು ಹಿರಿಯರಿಂದ ದೂರ ಹೋಗುತ್ತಿರುವ ಕಾರಣ ಅನಾಥಾಶ್ರಮ, ವೃದ್ಧಾಶ್ರಮಗಳು ಜಾಸ್ತಿಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ನಾಯಕ ನಟ ಪ್ರಣಮ್ ದೇವರಾಜ್ ಮಾತನಾಡಿ, ಇದು ಮನೆ ಮನೆ ಕತೆಯಾಗಿದೆ. ಚಿತ್ರದಲ್ಲಿನ ಪಾತ್ರಗಳು ನಿಜ ಜೀವನಕ್ಕೆ ಹತ್ತಿರ ಇರುವುದರಿಂದ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ವಾರಾಣಸಿಯಲ್ಲೂ ಚಿತ್ರೀಕರಣ ಮಾಡಿದ್ದೇವೆ. ಸಿನಿಮಾದ 2 ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಕನ್ನಡದಲ್ಲಿ ನಾನು ಅಭಿನಯಿಸಿ ಬಿಡುಗಡೆಯಾಗುತ್ತಿರುವ 2ನೇ ಚಿತ್ರ ಇದಾಗಿದೆ ಎಂದು ತಿಳಿಸಿದರು.