ಶಾಮನೂರಿನಲ್ಲಿ ಡೆಂಘೆ ಜಾಗೃತಿ ಜಾಥಾ

jatha.jpg
Published on

ದಾವಣಗೆರೆ : ನಗರ ಕುಟುಂಬ ಕಲ್ಯಾಣ ಕೇಂದ್ರ 3 ರ ವ್ಯಾಪ್ತಿಯ ಶಾಮನೂರಿನಲ್ಲಿ ಬುಧವಾರ ಸರ್ಕಾರಿ ಪ್ರೌಢಶಾಲೆಯ ಮಕ್ಕಳೊಂದಿಗೆ ವಿವಿಧ ಬೀದಿಗಳಲ್ಲಿ ಡೆಂಘೆ ಜ್ವರದ ಬಗ್ಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.  ಡೆಂಘೆ ಜ್ವರ ಹರಡುವ ವಿಧಾನ, ಮುನ್ನೆಚ್ಚರಿಕೆ ಕ್ರಮಗಳು ಮತ್ತು ತಡೆಗಟ್ಟುವಿಕೆ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಮಳೆಗಾಲ ಆಗಿರುವುದರಿಂದ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಿಂತ ನೀರು ಸೊಳ್ಳೆಗಳ ತವರು. ಕೀಟ ಚಿಕ್ಕದು, ಕಾಟ ದೊಡ್ಡದು ಎಂದು ತಿಳಿಸಿಕೊಡಲಾಯಿತು.  ಮನೆಯಲ್ಲಿ ನೀರಿನ ಸಂಗ್ರಹಣಾ ಪರಿಕರಗಳನ್ನು ಮುಚ್ಚಿಡಬೇಕು. ಮನೆಯ ಹೊರಗೆ, ಅಕ್ಕಪಕ್ಕದ ಖಾಲಿ ಜಾಗಗಳಲ್ಲಿ ಬಿದ್ದ ಚಿಪ್ಪುಗಳು, ಟೈರುಗಳನ್ನು ಸರಿಯಾದ ರೀತಿ ವಿಲೇವಾರಿ ಮಾಡಬೇಕು. ಎಲ್ಲಿಯೂ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದರೆ ಡೆಂೆ ಜ್ವರ ನಿಯಂತ್ರಣ ಸಾಧ್ಯ.  ಡೆಂಗ್ ಜ್ವರ ನಿಯಂತ್ರಣದಲ್ಲಿ ಸಮುದಾಯದ ಸಹಭಾಗಿತ್ವ ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬ ಪ್ರಜೆಯು ಕೈಜೋಡಿಸಿದಾಗ ಮಾತ್ರ ಡೆಂಘೆ ಮುಕ್ತ ನಾಡಾಗಿಸಬಹುದು ಎಂದು ಮನವರಿಕೆ ಮಾಡಿಕೊಡಲಾಯಿತು.  ನಗರ ಕುಟುಂಬ ಕಲ್ಯಾಣ ಕೇಂದ್ರ 3ರ ವೈದ್ಯಾಧಿಕಾರಿ ಡಾ. ತಾಯಮ್ಮ ಶಾಮನೂರು, ಶಾಲಾ ಮುಖ್ಯೋಪಾಧ್ಯಾಯ ಬಸವರಾಜಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ. ಪ್ರಕಾಶ್, ಬಿ.ಸಿ. ಮನೋಜ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಎಸ್. ರೇಣುಕಾ, ಟಿ. ವಿನೋದಮ್ಮ, ನಂದಿನಿ, ಉಮಾಬಾಯಿ, ಅಮೃತಾ, ಶಿವಲೀಲಾ, ಸುಧಾರಾಣಿ, ಗ್ರಾಮದ ಮುಖಂಡರಾದ ರುದ್ರೇಶ್, ಹಿರಿಯ ನಾಗರಿಕರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net