

ದಾವಣಗೆರೆ : ಸಂಪತ್ತಿನ ಅಧಿದೇವತೆ ವರ ಮಹಾಲಕ್ಷ್ಮಿ ಹಬ್ಬದ ಆಚರಣೆಗಾಗಿ ಗುರುವಾರ ನಗರದ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ ಸೇರಿ ವಸ್ತುಗಳ ಖರೀದಿ ಭರಾಟೆಯಿಂದ ನಡೆಯಿತು. ನಗರದ ಜಯದೇವ ವೃತ್ತದಿಂದ ಹಳೇ ಬಸ್‌ನಿಲ್ದಾಣ ಮಾರ್ಗದ ರಸ್ತೆಯಲ್ಲಿ ಬೆಳಗ್ಗೆಯಿಂದಲೇ ಹಬ್ಬದ ವಸ್ತುಗಳ ಖರೀದಿ ಜೋರಾಗಿತ್ತು. ಸಂಜೆ ಅಧಿಕ ಜನದಟ್ಟಣೆಯಿಂದ ಕೂಡಿತ್ತು. ಪೂಜಾ ಸಾಮಗ್ರಿ, ತೆಂಗಿನಕಾಯಿ, ವೀಳ್ಯದೆಲೆ, ಹೂವು-ಹಣ್ಣು, ಹೂವಿನ ಹಾರಗಳು, ಮಾವಿನ ತಳಿರು, ಬಾಳೇದಿಂಡು ಮೊದಲಾದ ವಸ್ತುಗಳನ್ನು ಗ್ರಾಹಕರು ಖರೀದಿಸಿದರು. ವಸ್ತುಗಳ ಬೆಲೆ ಗಗನಕ್ಕೆರಿದ್ದರೂ ಜನತೆ ತಮ್ಮ ಮಿತಿಯಲ್ಲಿ ಕೊಂಡೊಯ್ದರು. ಹಣ್ಣುಗಳು ಕೆಜಿಗೆ ಸೇಬು 200ರಿಂದ 250 ರೂ, ಕಿತ್ತಳೆ 200 ರೂ, ಮೋಸಂಬಿ 100 ರಿಂದ 150 ರೂ, ಬಾಳೇಹಣ್ಣು ಕೆಜಿ 100ರಿಂದ 150 ರೂ. ಹಾಗೂ ಮಿಶ್ರ ಹಣ್ಣುಗಳು 200 ರೂ. ಬೆಲೆ ನಿಗದಿಪಡಿಸಲಾಗಿತ್ತು. ಇನ್ನೂ ಹೂಗಳ ಬೆಲೆಯೂ ಗಗನಕ್ಕೇರಿತ್ತು. ಒಂದು ಮಾರು ಸೇವಂತಿಗೆ 80ರಿಂದ 150 ರೂ, ಕನಕಾಂಬರ 150 ರೂ, ಮಲ್ಲಿಗೆ 100 ರೂ, ಹಾರಗಳು ಸುಗಂಧರಾಜ 100 ರೂ, ಸೇವಂತಿಗೆ 150 ರೂ., ದುಂಡು ಮಲ್ಲಿಗೆ 400 ರೂ, ಗುಲಾಬಿ ದಳ 500 ರೂ.ಗೆ ಮಾರಾಟವಾದವು.