ನಿಟುವಳ್ಳಿಯಲ್ಲಿ ಶ್ರದ್ಧಾಭಕ್ತಿಯ ಅಜ್ಜಿ ಹಬ್ಬ

ajji.jpg
Published on

ದಾವಣಗೆರೆ : ಮನೆ, ಮನೆಗಳಿಂದ ಹಣ್ಣು-ಕಾಯಿ, ನೈವೇದ್ಯದೊಂದಿಗೆ ಅಮ್ಮನ ಕುಡಿಕೆ ತಂದ ಭಕ್ತರು. ಅಮ್ಮನಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ್ದ ದೇವಿಯ ಉತ್ಸವಮೂರ್ತಿಗೆ ಪೂಜೆ ಸಲ್ಲಿಕೆ. ಕರಮುಗಿದು ಪ್ರಾರ್ಥಿಸಿದ ಭಕ್ತಗಣ.  ಅಜ್ಜಿ ಹಬ್ಬದ ಅಂಗವಾಗಿ ನಗರದ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಬಳಿ ಶುಕ್ರವಾರ ಕಂಡುಬಂದ ದೃಶ್ಯವಿದು. ಬೆಳಗ್ಗೆಯಿಂದ ಸಂಜೆಯವರೆಗೂ ದೇಗುಲಕ್ಕೆ ಕುಟುಂಬದವರೊಂದಿಗೆ ಆಗಮಿಸಿದ ಜನರು ಭಕ್ತಿ ಸಮರ್ಪಿಸಿದರು. ಸಂಪ್ರದಾಯದಂತೆ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ನವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.  ನಿಟುವಳ್ಳಿ ಹೊಸ ಬಡಾವಣೆ, ಶಕ್ತಿನಗರ, ಚಿಕ್ಕಮಣ್ಣಿ ದೇವರಾಜ ಅರಸು ಬಡಾವಣೆ, ದುರ್ಗಾಂಬಿಕಾ ಬಡಾವಣೆ, ಮೌನೇಶ್ವರ ಬಡಾವಣೆ, ಕೊಟ್ಟೂರೇಶ್ವರ ಬಡಾವಣೆ, ಚಿಕ್ಕನಹಳ್ಳಿಯ ಮನೆಗಳಲ್ಲಿ ಭಕ್ತರು ಮಡಿಯಿಂದ ಹಬ್ಬ ಆಚರಿಸಿ ಆರೋಗ್ಯ ಭಾಗ್ಯ ನೀಡುವಂತೆ ದೇವಿಯಲ್ಲಿ ಮೊರೆಯಿಟ್ಟರು.  ಮನೆಗಳಲ್ಲಿ ಅಮ್ಮನ ಕುಡಿಕೆಯಲ್ಲಿ ಬೇವಿನಪತ್ರೆ ಇರಿಸಿ ಪೂಜೆ ಸಲ್ಲಿಸಿದ ಭಕ್ತರು ಹಣ್ಣು-ಕಾಯಿ, ಹೋಳಿಗೆ ನೈವೇದ್ಯ ಸಮರ್ಪಿಸಿದರು. ನಂತರ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ, ಮುಂಭಾಗದಲ್ಲಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ್ದ ಅಮ್ಮನ ಕಟ್ಟೆಗೆ ಪೂಜೆ ಸಲ್ಲಿಸಿ ಅಮ್ಮನ ಕುಡಿಕೆ, ಹೋಳಿಗೆ-ಕರಿಗಡುಬು ನೈವೇದ್ಯ ಹಾಗೂ ಹಣ್ಣು-ಕಾಯಿ ಸಲ್ಲಿಸಿ ಕೈಮುಗಿದು ಪ್ರಾರ್ಥಿಸಿದರು.  ದೇವಾಲಯದಲ್ಲಿ ಬಹಳ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಅಜ್ಜಿ ಹಬ್ಬ ಆಚರಿಸಿಕೊಂಡು ಬರಲಾಗಿದೆ. ಮಳೆಗಾಲದಲ್ಲಿ ಸಹಜವಾಗಿ ಕಾಯಿಲೆಗಳು ಬರುವ ಸಂಭವ ಹೆಚ್ಚು. ಹೀಗಾಗಿ, ಯಾವುದೇ ರೋಗ ರುಜಿನ ಬಾರದಿರಲೆಂದು ಪ್ರಾರ್ಥಿಸಿ ಅಜ್ಜಿ ಹಬ್ಬ ಆಚರಣೆ ಮಾಡಲಾಗುತ್ತದೆ ಎಂದು ದೇವಸ್ಥಾನ ಟ್ರಸ್ಟ್‌ನ ಸದಸ್ಯರಾದ ಎಂ.ಬಿ. ಜಯಪ್ಪ ಹಾಗೂ ಪಿ. ಮಂಜುನಾಥ್ ತಿಳಿಸಿದರು.  ಭಕ್ತರು ದೇವಸ್ಥಾನಕ್ಕೆ ಸಲ್ಲಿಸಿದ ಅಮ್ಮನ ಕುಡಿಕೆಗಳನ್ನು ರಾತ್ರಿ ಸಮಯದಲ್ಲಿ ದೇವಿಯನ್ನು ಹೊರಡಿಸಿಕೊಂಡು ಟ್ರಾೃಕ್ಟರ್‌ಗಳಲ್ಲಿ ತೆಗೆದುಕೊಂಡು ಹೋಗಿ ಗಡಿದಾಟಿಸಿ ಇರಿಸುವ ಮೂಲಕ ಪೂಜೆ ಸಲ್ಲಿಸಿ ಬರಲಾಗುವುದು. ಹೋಳಿಗೆ, ಕರಿಗಡುಬು ನೈವೇದ್ಯವನ್ನು ಬಡಜನರು ಹಾಗೂ ಅನಾಥಾಶ್ರಮಗಳಿಗೆ ಪ್ರಸಾದವಾಗಿ ವಿತರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net