

ದಾವಣಗೆರೆ : ನಗರದ ವಿವಿಧ ದೇವಾಲಯಗಳಲ್ಲಿ ಭಾನುವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ಗುರು ಪೂರ್ಣಿಮೆ ಆಚರಿಸಲಾಯಿತು. ತಳಿರು ತೋರಣ ಹಾಗೂ ಬಗೆಬಗೆಯ ಹೂವುಗಳಿಂದ ಅಲಂಕೃತಗೊಂಡ ಮಂದಿರಗಳಲ್ಲಿ ವಿಶೇಷ ಪೂಜೆ ನೆರವೇರಿದವು. ಎಂಸಿಸಿ ‘ಎ’ ಬ್ಲಾಕ್‌ನ ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಜಯದೇವ ವೃತ್ತದ ಶ್ರೀ ಗುರು ದತ್ತಾತ್ರೇಯ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಗ್ಗೆಯಿಂದಲೇ ಮಂದಿರಗಳಿಗೆ ಆಗಮಿಸಿದ ಭಕ್ತರು ಗುರುನಮನ ಸಲ್ಲಿಸಿದರು. ಎಂಸಿಸಿ ‘ಎ’ ಬ್ಲಾಕ್‌ನ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬೆಳಗ್ಗೆ ಶ್ರೀ ಬಾಬಾರವರ ಬೆಳ್ಳಿ ಮೂರ್ತಿಗೆ ಹಾಲಿನ ಅಭಿಷೇಕ ನಡೆಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಹೂಗಳ ಅಲಂಕಾರ, ತಾವರೆ ಹಾಗೂ ಗುಲಾಬಿ ಹೂಗಳ ಹಾರದೊಂದಿಗೆ ಸ್ವರ್ಣ ಕಿರೀಟ ಧರಿಸಿ ವಿರಾಜಮಾನರಾದ ಸ್ವಾಮಿಯ ದರ್ಶನ ಪಡೆದ ಭಕ್ತರು ಕಣ್ತುಂಬಿಕೊಂಡರು. ಮಧ್ಯಾಹ್ನ ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ರಾತ್ರಿ ಪಲ್ಲಕ್ಕಿ ಉತ್ಸವ, ಶ್ರೀ ಸಾಯಿ ಧುನಿ ಪೂಜೆ, ಶೇಜಾರತಿ ಹಾಗೂ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು. ಬೆಳಗ್ಗೆಯಿಂದ ರಾತ್ರಿವರೆಗೂ ಜಿಟಿಜಿಟಿ ಮಳೆಯಲ್ಲೂ ಮಂದಿರಕ್ಕೆ ಭೇಟಿ ನೀಡಿದ ಸಹಸ್ರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಉದ್ಯಮಿ ಎಸ್.ಎಸ್. ಗಣೇಶ್ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಸತ್ಯದತ್ತ ವೃತ: ನಗರದ ಜಯದೇವ ವೃತ್ತದ ಶಿವಾನಂದ ತೀರ್ಥಗುರು ಅಧ್ಯಾತ್ಮ ಮಂದಿರದಲ್ಲಿ ಶ್ರೀ ಗುರು ದತ್ತಾತ್ರೇಯ ಸ್ವಾಮಿಯ 38ನೇ ಪ್ರತಿಷ್ಠಾಪನಾ ಸುಸ್ಮರಣ ಮತ್ತು ವಾರ್ಷಿಕೋತ್ಸವ ಹಾಗೂ 108 ಶ್ರೀ ಸತ್ಯದತ್ತ ವೃತ ಮಹೋತ್ಸವವು ಸಾಂಪ್ರದಾಯಿಕ ಶ್ರದ್ಧಾಭಕ್ತಿಗಳಿಂದ ನೆರವೇರಿತು. ಪ್ರಾತಃಕಾಲ ಕಾಕಡಾರತಿ, ಗಣಪತಿ ಪೂಜೆ, ಪಂಚಾಮೃತ ಅಭಿಷೇಕ ನಡೆಸಲಾಯಿತು. ಶ್ರೀಗುರು ದತ್ತಾತ್ರೇಯನಿಗೆ ವಿಶೇಷವಾಗಿ ಹತ್ತಿಯ ಅಲಂಕಾರದೊಂದಿಗೆ ವಿವಿಧ ಪತ್ರೆ ಪುಷ್ಪಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು ಹಾಗೂ 108 ಕಳಶಗಳ ಶ್ರೀ ಸತ್ಯದತ್ತ ವೃತ ಪೂಜೆ ನಡೆಯಿತು. ಪ್ರಧಾನ ಅರ್ಚಕ ಶಿವರಾಮಶಾಸ್ತ್ರಿ ಮತ್ತು ಸಂಗಡಿಗರಿಂದ ಪೂಜಾ ಕಾರ್ಯ ನೆರವೇರಿದವು. ಶ್ರೀ ವಾಗ್ದೇವಿ ಭಜನಾ ಮಂಡಳಿ, ಶ್ರೀ ಸಾಯಿ ಭಜನಾ ಮಂಡಳಿ ಹಾಗೂ ಶ್ರೀ ವೈಷ್ಣವಿ ಭಜನಾ ಮಂಡಳಿಗಳಿಂದ ಭಜನೆ ನಡೆಸಿ ಶ್ರೀ ಗುರುವಿನ ಸ್ಮರಣೆ ಮಾಡಲಾಯಿತು. ರೋಟರಿ ಕ್ಲಬ್ ದಕ್ಷಿಣದಿಂದ ಪ್ರಸಾದ ವಿತರಣೆ ನೆರವೇರಿತು. ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ಹಾಗೂ ರಾಜನಹಳ್ಳಿ ಕಾಂತಲಕ್ಷ್ಮಮ್ಮ ಆರ್.ವಿ. ಗೋಪಾಲಕೃಷ್ಣ ಶ್ರೇಷ್ಠಿ ವ್ಯವಸ್ಥಾಪನೆಯಲ್ಲಿ ಅಧ್ಯಾತ್ಮ ಮಂದಿರದ ಪ್ರಮುಖರಾದ ಆರ್.ಎಸ್. ನಾರಾಯಣಸ್ವಾಮಿ, ಆರ್.ಜಿ. ನಾಗೇಂದ್ರ ಪ್ರಸಾದ್, ಶ್ರೀಧರ ಶ್ರೇಷ್ಠಿ, ಆರ್.ಜಿ. ಶ್ರೀನಿವಾಸ್‌ಮೂರ್ತಿ, ಬದರಿ ಪ್ರಸಾದ್, ದತ್ತಮೂರ್ತಿ, ಸೌಖ್ಯಾ ಸಾಗರ್, ಗೀತಾ ಶ್ರೀಧರ್, ಹಿರಿಯ ಪತ್ರಕರ್ತ ಡಾ.ಎಚ್.ಬಿ. ಮಂಜುನಾಥ್, ಡಾ.ಎಸ್.ಎಚ್. ಸುಜಿತ್‌ಕುಮಾರ್ ಇತರರು ಭಾಗವಹಿಸಿದ್ದರು. ಅಲ್ಲದೇ ನಗರದ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ, ಕೆ.ಬಿ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠಗಳಿಗೆ ತೆರಳಿದ ಭಕ್ತರು ಭಕ್ತಿಯಿಂದ ಪೂಜೆ ಸಲ್ಲಿಸಿ ದರ್ಶನ ಪಡೆದರು. ಋಷಿ ಸಂಸ್ಕೃತಿ ವಿದ್ಯಾಕೇಂದ್ರ ಹಾಗೂ ಸಿದ್ಧ ಸಮಾಧಿ ಯೋಗ ಸಹಯೋಗದಲ್ಲಿ ಆರ್.ಎಚ್. ಗೀತಾ ಮಂದಿರದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಆಯೋಜಿಸಲಾಗಿತ್ತು.