

ದಾವಣಗೆರೆ : ನವರಾತ್ರಿ ಹಬ್ಬವು ಸ್ತ್ರೀ ಶಕ್ತಿಯ ಸಂಕೇತ ಎಂದು ಪಿಕಾಕ್ ಆ್ಯಂಡ್ ಕೋ ಚೇರ್ಮನ್ ಎನ್.ಆರ್. ನಾಗಭೂಷಣ್ ಹೇಳಿದರು.
ನೃತ್ಯ ವಿದ್ಯಾನಿಲಯದಿಂದ ನವರಾತ್ರಿಯ ಹಬ್ಬದ ಪ್ರಯುಕ್ತ ನಗರದ ಸರಸ್ವತಿ ನಗರ ಎ ಬ್ಲಾಕ್‌ನ ಕಲಾಶೈಲದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿದ್ವತ್ ಸಭೆ ಮತ್ತು ನವರಾತ್ರಿ ಉತ್ಸವ ಉದ್ಘಾಟಿಸಿ, ಮಾತನಾಡಿದರು.
ದೇವಿಯು ನವರಾತ್ರಿಯ ಒಂಬತ್ತು ದಿನಗಳಲ್ಲಿ ಒಂದೊಂದು ರೂಪದಲ್ಲಿ ಶಕ್ತಿ ಸ್ವರೂಪಳಾಗಿ ಗೋಚರಿಸುತ್ತಾಳೆ. ಅದೇ ರೀತಿ ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಕೈಗೊಂಡು ಜಗತ್ತಿನ ಗಮನ ಸೆಳೆಯುತ್ತಿದ್ದಾರೆ ಎಂದು ತಿಳಿಸಿದರು.
ಚಿರಂತನ ಅಕಾಡೆಮಿಯ ಕಾರ್ಯದರ್ಶಿ ಮಾಧವ ಪದಕಿ ಮಾತನಾಡಿ, ನವರಾತ್ರಿ ಉತ್ಸವವು ದೇವರನ್ನು ಆರಾಧಿಸುವ ಮೂಲಕ ಒಲುಮೆ ಪಡೆಯುವ ಶುಭ ಸಂದರ್ಭ ಎಂದು ತಿಳಿಸಿದರು.
ನೃತ್ಯ ವಿದ್ಯಾನಿಲಯದ ಮುಖ್ಯಶಿಕ್ಷಕಿ ವಿದುಷಿ ರಕ್ಷಾ ರಾಜಶೇಖರ ಮಾತನಾಡಿ, ವಿದ್ಯೆಯಿಂದ ಸಂಸ್ಕಾರ, ವಿನಯ, ನಡತೆ, ಸಂಪತ್ತು ಹಾಗೂ ನೆಮ್ಮದಿ ದೊರೆಯುತ್ತದೆ ಎಂದರು.
ನಾದ ನೃತ್ಯಾಲಯದ ವಿದುಷಿ ಅನನ್ಯ ಸಂಪತ್‌ಕುಮಾರ್ ಮಾತನಾಡಿ, ಮಹಿಳೆ ಸಾಂಸ್ಕೃತಿಕ ಶ್ರೀಮಂತಿಕೆ ಪಡೆಯಲು ಜ್ಞಾನದೊಂದಿಗೆ ಕುಟುಂಬದ ಪ್ರೋತ್ಸಾಹವೂ ಬೇಕು ಎಂದು ಹೇಳಿದರು.
ನೃತ್ಯ ವಿದ್ಯಾನಿಲಯ ಮುಖ್ಯಸ್ಥ ರಾಜಶೇಖರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅನುಶ್ರೀ ಸಂಗೀತ ಶಾಲೆಯ ಗುರು ವೀಣಾ ಹೆಗಡೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಾಸ್ತ್ರೀಯ, ಜಾನಪದ, ಸೆಮಿ ಕ್ಲಾಸಿಕಲ್ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಮನಸೆಳೆದವು.