

ದಾವಣಗೆರೆ : ಜಿಲ್ಲಾದ್ಯಂತ ಶುಕ್ರವಾರ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಹಬ್ಬದ ಅಂಗವಾಗಿ ಡಿಜೆಗಳ ಅಬ್ಬರವಿಲ್ಲದೇ ಶಾಂತಿಯುತವಾಗಿ ಮೆರವಣಿಗೆ ನಡೆಯಿತು. ಇಲ್ಲಿನ ಆಜಾದ್ ನಗರದಿಂದ ಆರಂಭವಾದ ಮೆರವಣಿಗೆ ಅಹಮದ್ ನಗರ, ಚಾಮರಾಜಪೇಟೆ, ಮಂಡಿಪೇಟೆ, ವಸಂತ ರಸ್ತೆ, ಪಿಬಿ ರಸ್ತೆಯ ಮೂಲಕ ಮಹಾತ್ಮ ಗಾಂಧಿ ವೃತ್ತವನ್ನು ತಲುಪಿತು. ನಗರದ ವಿವಿಧ ಬಡಾವಣೆಗಳಿಂದ ಹೊರಟ ಮೆರವಣಿಗೆಗಳು ಅಲ್ಲಿಗೇ ಬಂದು ಸೇರಿದವು. ಗಾಂಧಿ ವೃತ್ತದಿಂದ ಹೊರಟು ಕೆ.ಆರ್. ರಸ್ತೆ, ಮಾಗಾನಹಳ್ಳಿ ರಸ್ತೆಯ ಮೂಲಕ ಮಂಡಕ್ಕಿ ಭಟ್ಟಿ ಲೇಔಟ್‌ನಲ್ಲಿರುವ ಮಿಲಾದ್ ಮೈದಾನದಲ್ಲಿ ಸಮಾರೋಪಗೊಂಡಿತು. ಮೆರವಣಿಗೆಯಲ್ಲಿ ಶುಭಾಶಯಗಳ ವಿನಿಮಯ ಮಾಡಿಕೊಳ್ಳುವ ದೃಶ್ಯ ಕಂಡುಬಂದಿತು. ವಿವಿಧ ಸಂಘ ಸಂಸ್ಥೆಯವರು ಶರಬತ್ ಮತ್ತು ಸಿಹಿ ವಿತರಿಸಿದರು. ಮಕ್ಕಳು ಹೊಸ ಉಡುಗೆ ತೊಟ್ಟು ಸಂಭ್ರಮಿಸಿದರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡು ಹಬ್ಬದ ಶುಭಾಶಯ ಕೋರಿದರು. ಪೊಲೀಸ್ ಇಲಾಖೆಯಿಂದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಎಸ್ಪಿ ಉಮಾ ಪ್ರಶಾಂತ್ ಅವರು ನಗರದಲ್ಲಿ ಸಂಚರಿಸಿ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿತ್ತು.