

ದಾವಣಗೆರೆ : ಐತಿಹಾಸಿಕ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಕಾರ್ಣೀಕ ಮಹೋತ್ಸವ ಸೋಮವಾರ ನೆರವೇರಿತು. ಆನೆಕೊಂಡದ ಶ್ರೀ ಬಸವೇಶ್ವರ, ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ, ನಿಟುವಳ್ಳಿ ದುರ್ಗಾಂಬಿಕಾ ದೇವಿ ಮತ್ತು ಸುತ್ತಮುತ್ತಲಿನ ದೇವರುಗಳ ಉತ್ಸವ ಮೂರ್ತಿಗಳು ಮಟ್ಟಿಕಲ್ ಮರಡಿ ಬಸವೇಶ್ವರ ದೇವಸ್ಥಾನದ ಆವರಣಕ್ಕೆ ಬಂದು ಸಮಾವೇಶಗೊಂಡವು. ಉತ್ಸವ ಮೂರ್ತಿಗಳು ಕಾರ್ಣೀಕ ಕಂಬಕ್ಕೆ ಪ್ರದಕ್ಷಿಣೆ ಹಾಕಿದವು. ನಂತರ ದಾಸಪ್ಪ ಅವರು ಕಾರ್ಣೀಕ ನುಡಿದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಈ ಸಂದರ್ಭಕ್ಕೆ ಸಾಕ್ಷಿಯಾದರು. ಉತ್ಸವ ಮೂರ್ತಿಗಳನ್ನು ಹಣ್ಣು, ಹೂವು, ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ದೇವರ ಮೂರ್ತಿ ಜತೆಗೆ ಆಯಾ ಊರಿನ ಭಕ್ತರೂ ಆಗಮಿಸಿದ್ದರು. ಮಟ್ಟಿಕಲ್ ಬಸವೇಶ್ವರ ದೇವಸ್ಥಾನದ ಆವರಣದ ಸುತ್ತಲೂ ಜನಸ್ತೋಮ ಸೇರಿತ್ತು. ದಾವಣಗೆರೆ ಹಾಗೂ ಸುತ್ತಮುತ್ತಲಿನ ಊರುಗಳಿಂದ ಭಕ್ತರು ಆಗಮಿಸಿದ್ದರು. ಮಹಿಳೆಯರು, ಮಕ್ಕಳೂ ಭಾಗವಹಿಸಿದ್ದರು.