

ದಾವಣಗೆರೆ : ವಿಶ್ವಾವಸು ಸಂವತ್ಸರವನ್ನು ಸ್ವಾಗತಿಸುವ ಮೂಲಕ ಯುಗಾದಿ ಹಬ್ಬವನ್ನು ಜಿಲ್ಲೆಯಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಮನೆ ಮನೆಯಲ್ಲೂ ಹಬ್ಬದ ಖುಷಿ ಆವರಿಸಿತ್ತು. ಬಾಗಿಲಿಗೆ ಹಸಿರು ತೋರಣ ಕಟ್ಟಿ ಶೃಂಗಾರ ಮಾಡಲಾಗಿತ್ತು. ಬೆಳಗ್ಗೆ ಅಭ್ಯಂಗದ ನಂತರ ದೇವರಿಗೆ ಬೇವಿನ ಹೂವನ್ನು ಸಮರ್ಪಣೆ ಮಾಡಲಾಯಿತು. ಹೊಸ ಬಟ್ಟೆ ತೊಟ್ಟು ಸಂಭ್ರಮಿಸಲಾಯಿತು. ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯುವ ದೃಶ್ಯ ಸಾಮಾನ್ಯವಾಗಿತ್ತು. ಪಂಚಾಂಗ ಶ್ರವಣವೂ ನಡೆಯಿತು. ಬೇವು-ಬೆಲ್ಲವನ್ನು ಸೇವಿಸಿ ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕಲ್ಪ ಮಾಡಲಾಯಿತು. ಹೋಳಿಗೆ ಇತ್ಯಾದಿ ಸಿಹಿ ಭೋಜನ ಸವಿಯಲಾಯಿತು. ಯುಗಾದಿಯು ಹೊಸ ವರ್ಷದ ಆರಂಭ. ಸಂವತ್ಸರ ಎಂದರೆ ದೇವರು. ಇದು ವಿಶ್ವಾವಸು ಸಂವತ್ಸರ. ವಿಶ್ವ ಎಂದರೆ ಭಗವಂತ, ವಸು ಎಂದರೆ ಸಂಪತ್ತು ಎಂದು ಸಂಸ್ಕೃತ ಅಧ್ಯಾಪಕ ಕೃಷ್ಣಾಚಾರ್ ಮಣ್ಣೂರ್ ತಿಳಿಸಿದರು. ... * ಚಂದ್ರ ದರ್ಶನ ಯುಗಾದಿ ಹಬ್ಬದ ಅಂಗವಾಗಿ ಚಂದ್ರನ ದರ್ಶನ ಮಾಡುವ ಪದ್ಧತಿಯಿದೆ. ಸೋಮವಾರ ರಾತ್ರಿ ಆಕಾಶದಲ್ಲಿ ಚಂದ್ರನನ್ನು ನೋಡಲು ಸಾರ್ವಜನಿಕರು ಕಾಯುತ್ತಿದ್ದರು. ಹೈಸ್ಕೂಲ್ ಮೈದಾನ, ದೀಕ್ಷಿತ್ ರಸ್ತೆ ಸೇರಿದಂತೆ ವಿವಿಧೆಡೆ ಮಹಿಳೆಯರು, ಮಕ್ಕಳು ಸೇರಿದಂತೆ ಜನರು ಗುಂಪಾಗಿ ನಿಂತು ಆಕಾಶದ ಕಡೆಗೆ ದಿಟ್ಟಿಸುವ ದೃಶ್ಯ ಕಂಡುಬಂದಿತು. ‘ಅಗೋ ಅಲ್ಲಿ... ಚಂದ್ರ ನನಗೆ ಕಂಡ’ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದರು. ಚಂದ್ರನತ್ತ ಕೈಮುಗಿದು ಧನ್ಯತಾ ಭಾವ ಅನುಭವಿಸಿದರು.