

ದಾವಣಗೆರೆ : ಆಧುನಿಕತೆಯ ಕಾಲಘಟ್ಟದಲ್ಲಿ ಸಮಕಾಲೀನ ಸವಾಲುಗಳಿಗೆ ಸಾಹಿತ್ಯ ಮುಖಾಮುಖಿ ಆಗಬೇಕು ಎಂದು ಸಾಹಿತಿ ಎಲ್. ಹನುಮಂತಯ್ಯ ಹೇಳಿದರು. ದಾವಣಗೆರೆ ಲಿಟರರಿ ಫೋರಂ ಮತ್ತು ಅರಸೀಕೆರೆಯ ಅರಸೀ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ನಗರದ ಎಂಬಿಎ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಅಕ್ಷರ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು. ದೇಶದಲ್ಲಿ ಶೇ. 65ರಷ್ಟಿರುವ ರೈತರು ಹಲವು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅವರ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ಅನ್ನದಾತರು ಜಮೀನು ಕಳೆದುಕೊಂಡು ಮನೋಕ್ಷೋಭೆಗೆ ಒಳಗಾಗಿದ್ದಾರೆ. ಅವರ ಬವಣೆಯನ್ನು ಲೇಖಕರು ಬರವಣಿಗೆಗೆ ಇಳಿಸಬೇಕು ಎಂದು ಸಲಹೆ ನೀಡಿದರು. ಲಿವಿಂಗ್ ಟುಗೆದರ್ ಸಂಸ್ಕೃತಿ ನಮ್ಮ ಸಮಾಜಕ್ಕೂ ಕಾಲಿಟ್ಟಿದೆ. ಇದೊಂದು ಮೌನಕ್ರಾಂತಿಯಾಗಿದೆ. ಈ ವೈರುಧ್ಯಗಳನ್ನು ಚಿತ್ರಿಸಬೇಕು. ಅಸ್ಪಶ್ಯತೆಯ ರೂಪಗಳು ಬದಲಾಗಿವೆ. ವಿನಾಶದ ಅಂಚಿನಲ್ಲಿರುವ ಕುಂಬಾರಿಕೆ, ಕಮ್ಮಾರಿಕೆ ಇತ್ಯಾದಿ ಪಾರಂಪರಿಕ ಕಸಬುಗಳ ಪುನರುಜ್ಜೀವನ ಆಗಬೇಕಿದೆ. ಇಂಥ ವಿಷಯಗಳಿಗೆ ಲೇಖಕರು ಕನ್ನಡಿ ಹಿಡಿಯಬೇಕು ಎಂದು ತಿಳಿಸಿದರು. ಸ್ವಾಭಿಮಾನವು ಸಾಹಿತ್ಯದ ಸಂಭ್ರಮ ಆಗಬೇಕು. ಶರಣ ಬದುಕು ನಮಗೆ ಆದರ್ಶವಾಗಬೇಕು. ಸಂವಿಧಾನದ ಆಶಯಗಳು ಪಾಲನೆಯಾಗಬೇಕು. ಸಮಾಜದಲ್ಲಿ ಸಮಾನತೆ, ಶಾಂತಿ ನೆಲೆಸಬೇಕು. ಸಾಹಿತ್ಯವು ಧಾರ್ಮಿಕ ಭಯೋತ್ಪಾದನೆ ಹೋಗಲಾಡಿಸಿ ಸಮನ್ವಯದ ಸಾಮಾಜಿಕ ವ್ಯವಸ್ಥೆ ಕಟ್ಟುವ ಮೆಟ್ಟಿಲಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತನಾಡಿ, ಅಂಬೇಡ್ಕರ್ ಅವರು ದಲಿತರಿಗೆ ಸೀಮಿತ ಎನ್ನುವ ಭಾವನೆ ಸಮಾಜದ ಹಲವರಲ್ಲಿದೆ. ಇದು ಬದಲಾಗಬೇಕಿದೆ. ಎಲ್ಲ ಬರಹಗಾರರು ಈ ಬಗ್ಗೆ ಆಲೋಚಿಸಬೇಕು. ಸಂವಿಧಾನ ಉಳಿಸುವ ಕುರಿತು ಧ್ವನಿ ಎತ್ತಬೇಕಿದೆ ಎಂದರು. ದೂರದರ್ಶನ ಚಂದನ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್. ಆರತಿ ಮಾತನಾಡಿ, ಕೃತಕ ಬುದ್ಧಿಮತ್ತೆ (ಎಐ) ನಮ್ಮ ಸೃಜನಶೀಲತೆಯನ್ನು ಹಾಳು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕವಯಿತ್ರಿ ಚಾಂದಿನಿ ಮಾತನಾಡಿ, ಅಕ್ಷರ ಜ್ಞಾನವು ಬದುಕಿಗೆ ಘನತೆಯನ್ನು ತಂದುಕೊಡುತ್ತದೆ. ಸಾಮಾಜಿಕ ಒಳಗೊಳ್ಳುವಿಕೆ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು. ದಾವಣಗೆರೆ ಲಿಟರರಿ ಫೋರಂ ಸಂಚಾಲಕ ಶ್ರೀಹರ್ಷ ಸಾಲಿಮಠ ಪ್ರಾಸ್ತಾವಿಕ ಮಾತನಾಡಿದರು. ಉದಯ ಇಟಗಿ ಸ್ವಾಗತಿಸಿದರು. ಶ್ರೀವಿದ್ಯಾ ನಿರೂಪಿಸಿದರು. ಚೇತನ್ ಹಾಗೂ ಮಾನಸಾ ನಾಡಗೀತೆ ಹಾಡಿದರು. ... (ಬಾಕ್ಸ್) ವೈವಿಧ್ಯತೆ ಸ್ವೀಕಾರವೇ ಕುಂಭಮೇಳ ಹರಿಯುವ ನೀರಿನಲ್ಲಿ ಮುಳುಗುವುದು ಮಾತ್ರ ಕುಂಭಮೇಳ ಅಲ್ಲ ಎಂದು ಎಲ್. ಹನುಮಂತಯ್ಯ ಹೇಳಿದರು. ಭಾರತ ವೈವಿಧ್ಯತೆಗಳ ಸಂಗಮವಾಗಿದೆ. ದೇಶದ ವೈವಿಧ್ಯತೆಯನ್ನು ಅರ್ಥ ಮಾಡಿಕೊಂಡು ಅದನ್ನು ಸ್ವೀಕರಿಸುವುದೇ ನಿಜವಾದ ಕುಂಭಮೇಳ ಎಂದು ಅಭಿಪ್ರಾಯಪಟ್ಟರು. ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಕುಂಭ ಮೇಳದಲ್ಲಿ ದಿನಕ್ಕೆ 10 ಕೋಟಿ ಜನರು ಸ್ನಾನ ಮಾಡಿದರೆ ನದಿಗಳ ಕೊಳಕು ತೊಳೆಯುವವರು ಯಾರು ಎಂದು ಪ್ರಶ್ನಿಸಿದರು. ಸಮಾಜದಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಸಿಗದೇ ಇರುವ ಸ್ಥಿತಿ ಇದೆ. ಮರ್ಯಾದಾ ಹತ್ಯೆಗಳಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ... (ಬಾಕ್ಸ್) ಭಾಷೆಗಳ ಪತನದ ಆತಂಕ ದೇಶದಲ್ಲಿ ಬಹಳಷ್ಟು ಭಾಷೆಗಳು ಪತನಮುಖಿಯಾಗಿದ್ದು ಅವುಗಳನ್ನು ಎತ್ತಿ ಹಿಡಿಯಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು. ಕೊರಗ, ಕೊಡವ ಇನ್ನಿತರ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಅಂಕಿ ಅಂಶ ನೀಡಿದರು. ಭಾಷೆಯ ಸಾವಿಗೆ ಲೇಖಕರು ಮುಖಾಮುಖಿ ಆಗಬೇಕು ಎಂದರು. ... (ಕೋಟ್) ಸರ್ಕಾರಿ ಶಾಲೆಗಳು ಉದ್ಧಾರವಾಗಬೇಕಾದರೆ ಸರ್ಕಾರದ ಜತೆಗೆ ನಮ್ಮ ಪಾತ್ರವೂ ಮುಖ್ಯವಾಗಿದೆ. ಪಾಲಕರು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಮಕ್ಕಳನ್ನು ಸೇರಿಸುವುದು ಬಿಟ್ಟು ಸರ್ಕಾರಿ ಶಾಲೆಗೆ ದಾಖಲಿಸುತ್ತ ಹೋದರೆ ವ್ಯವಸ್ಥೆ ಎಚ್ಚರಗೊಳ್ಳುತ್ತದೆ. ಎಲ್.ಎನ್. ಮುಕುಂದರಾಜ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ