

ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ 3 ದಿನಗಳಲ್ಲಿ 2 ಸಾವಿರ ಮೆಟ್ರಿಕ್ ಟನ್ ಯೂರಿಯಾ ಪೂರೈಕೆ ವಿಜಯವಾಣಿ ಸುದ್ದಿಜಾಲ ದಾವಣಗೆರೆ ಜಿಲ್ಲೆಗೆ ಮುಂದಿನ ಮೂರು ದಿನಗಳಲ್ಲಿ 2050 ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯಾಗಲಿದ್ದು ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಬುಧವಾರ ಪ್ರಸಕ್ತ ಸಾಲಿನ ಕೃಷಿ ಇಲಾಖಾ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಮಾಯಕೊಂಡ, ಜಗಳೂರು, ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಮೆಕ್ಕೆಜೋಳ ಬೆಳೆಗೆ ಯೂರಿಯಾವನ್ನು ಮೇಲು ಗೊಬ್ಬರವಾಗಿ ಬಳಕೆ ಮಾಡಲಾಗುತ್ತಿದೆ. ಮುಂದಿನ 15 ದಿನಗಳಲ್ಲಿ ಇದು ಪೂರ್ಣಗೊಳ್ಳುತ್ತದೆ. ಭದ್ರಾ ಜಲಾಶಯ ಭರ್ತಿ ಹಂತಕ್ಕೆ ತಲುಪಿರುವುದರಿಂದ ಭತ್ತದ ಕೃಷಿ ಚಟುವಟಿಕೆಗಳು ಆರಂಭವಾಗಲಿವೆ. ಭತ್ತಕ್ಕೆ ತಳಗೊಬ್ಬರವಾಗಿ ಯೂರಿಯಾ ಬಳಕೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಉಂಟಾಗಿಲ್ಲ. ಜಿಲ್ಲೆಗೆ ಅಗತ್ಯಕ್ಕೆ ತಕ್ಕ ರಸಗೊಬ್ಬರ ಪೂರೈಕೆಯಾಗುತ್ತಿದೆ. ಭತ್ತದ ಬೆಳೆಗೆ ಮಾರಾಟಗಾರರು ಗೊಬ್ಬರದ ದಾಸ್ತಾನು ಇಟ್ಟಿರುವುದರಿಂದ ಮಾರುಕಟ್ಟೆಯಲ್ಲಿ ಗೊಬ್ಬರ ಇಲ್ಲವೆಂದು ರೈತರಲ್ಲಿ ಆತಂಕ ಉಂಟಾಗಿದೆ. ಗೊಬ್ಬರವನ್ನು ಯಾವುದೇ ಮಾರಾಟಗಾರರು ಮಾರಾಟ ಮಾಡದೇ ದಾಸ್ತಾನಿಟ್ಟುಕೊಳ್ಳುವಂತಿಲ್ಲ. ರೈತರಿಗೆ ನೀಡದೇ ದಾಸ್ತಾನಿಟ್ಟಿರುವ ಗೋಡೌನ್‌ಗಳನ್ನು ತಹಸೀಲ್ದಾರರು, ಉಪ ವಿಭಾಗಾಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದರು. ಯಾವುದೇ ಮಾರಾಟಗಾರರು ಅನವಶ್ಯಕವಾಗಿ ಗೊಬ್ಬರ ದಾಸ್ತಾನಿಟ್ಟಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ರೈತರು ಸಹ ಯೂರಿಯಾ ಗೊಬ್ಬರವನ್ನು ಹೆಚ್ಚು ಬಳಸದೇ ನ್ಯಾನೋ ಯೂರಿಯಾ ಬಳಕೆಗೆ ಮುಂದಾಗಬೇಕು. ನ್ಯಾನೋ ಯೂರಿಯಾ ಹರಳು ರೂಪದ ಯೂರಿಯಾಕ್ಕಿಂತಲೂ ಹೆಚ್ಚು ಗುಣಮಟ್ಟ, ಸಮೃದ್ಧತೆ ಹೊಂದಿರುತ್ತದೆ. ಕೆಲವು ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಯೂರಿಯಾ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ವರದಿ ಬಂದಿದೆ. ಅಂಥವರ ಬಗ್ಗೆ ರೈತರು ಸಹ ದೂರು ನೀಡಲು ಮುಂದೆ ಬರಬೇಕೆಂದು ತಿಳಿಸಿದರು. ರೈತರು ಫಸಲಿನ ಹೆಚ್ಚು ಇಳುವರಿ ತೆಗೆಯಲು ಬೆಳೆ ಪರಿವರ್ತನೆ ಪದ್ಧತಿಯನ್ನು ಅನುಸರಿಸಬೇಕು. ದ್ವಿದಳ ಧಾನ್ಯ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಇದರಿಂದ ರಸಗೊಬ್ಬರದ ಮೇಲಿನ ಹೆಚ್ಚು ಅವಲಂಬನೆ ತಪ್ಪುತ್ತದೆ. ಬೆಳೆ ಪರಿವರ್ತನೆ ಅನುಸರಿಸದೇ ಒಂದೇ ಬೆಳೆ ಬೆಳೆಯುವುದು ಮತ್ತು ಇದಕ್ಕೆ ಹೆಚ್ಚು ರಸಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಬೆಳೆಗಳಲ್ಲಿ ನುಸಿರೋಗ ಹೆಚ್ಚಳ ಮತ್ತು ಮುಳ್ಳು ಸಜ್ಜೆಯಂತಹ ಕಳೆ ಹೆಚ್ಚಾಗುತ್ತದೆ ಎಂದರು. ಇದರ ನಿಯಂತ್ರಣಕ್ಕಾಗಿ ರಾಸಾಯನಿಕ ಸಿಂಪರಣೆ ಮಾಡಬೇಕಾಗುತ್ತದೆ. ಇದು ರೈತರಿಗೆ ಆರ್ಥಿಕ ನಷ್ಟದ ಜತೆಗೆ ಕೂಲಿ ಕಾರ್ಮಿಕರ ಹೊರೆಯಾಗುತ್ತದೆ. ಆದ್ದರಿಂದ ಅಂತರ್ ಬೆಳೆಗಳು, ಬೆಳೆ ಪರಿವರ್ತನೆ ಜತೆಗೆ ನ್ಯಾನೋ ಯೂರಿಯಾ ಬಳಕೆಗೆ ಮುಂದಾಗಬೇಕೆಂದು ಮನವಿ ಮಾಡಿದರು.