ಪ್ರತಿ ತಿಂಗಳು ಜನತಾ ದರ್ಶನ ಸಭೆ

dvg-abhinandane-06.jpg
Published on

ದಾವಣಗೆರೆ :  ಕ್ಷೇತ್ರದ ಜನರ ಅಹವಾಲುಗಳಿಗೆ ಸ್ಪಂದಿಸಲು ಪ್ರತಿ ತಿಂಗಳು ಜನತಾ ದರ್ಶನ ಸಭೆ ಮಾಡಲಾಗುವುದು ಎಂದು ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಡಿ.ಟಿ. ಶ್ರೀನಿವಾಸ ಅಭಿಮಾನಿ ಬಳಗದಿಂದ ನಗರದ ಬಿಐಇಟಿ ಕಾಲೇಜು ಆವರಣದ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.  ಎಲ್ಲ ತಾಲೂಕುಗಳಲ್ಲಿ ಓಡಾಡಿದ್ದೇನೆ. ಜನರ ಸಮಸ್ಯೆಗಳ ಬಗ್ಗೆ ಅರಿವಿದೆ. ಶಾಸಕರು, ಮುಖಂಡರ ಜತೆಗೂ ಮಾತನಾಡಿದ್ದೇವೆ. ಎಲ್ಲರೂ ಕೈಜೋಡಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಶಾಲಾ ಕಾಲೇಜು, ಹಾಸ್ಟೆಲ್‌ಗಳಲ್ಲಿ ಸುಧಾರಣೆ ಮಾಡಬೇಕಿದೆ. ಆಸ್ಪತ್ರೆಗಳಲ್ಲಿ ವೈದ್ಯರು, ಔಷಧಗಳ ಲಭ್ಯತೆ ಸೇರಿ ಮೂಲಸೌಲಭ್ಯಗಳ ಸುಧಾರಣೆಗೆ ಪ್ರಯತ್ನಿಸಲಾಗುವುದು ಎಂದರು.  ಯುವಕ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಬಾಪೂಜಿ ವಿದ್ಯಾಸಂಸ್ಥೆಯಿಂದ ಕೇಂದ್ರವೊಂದನ್ನು ಆರಂಭಿಸುವ ಚಿಂತನೆಯಿದೆ. ಎಸ್‌ಎಸ್ ಕೇರ್ ಟ್ರಸ್ಟ್ ವತಿಯಿಂದ ಜನರ ಆರೋಗ್ಯ ರಕ್ಷಣೆಗೆ ಸಂಕಲ್ಪ ಮಾಡಿದ್ದೇವೆ. ವಿಶೇಷವಾಗಿ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.  ಇದುವರೆಗೆ ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾತ್ರ ಟ್ರಸ್ಟ್ ವತಿಯಿಂದ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿತ್ತು. ಇನ್ನುಮುಂದೆ ಈ ಸೌಲಭ್ಯವನ್ನು ಇತರ ತಾಲೂಕುಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.  ಕೇಂದ್ರ ಮತ್ತು ರಾಜ್ಯದ ಯೋಜನೆಗಳ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಅವುಗಳ ಪ್ರಯೋಜನವನ್ನು ಜನರಿಗೆ ತಲುಪಿಸಬೇಕಿದೆ. ಸರ್ಕಾರಿ ಕೆಲಸದಲ್ಲಿ ಪಾರದರ್ಶಕತೆ ಇರಬೇಕು, ಭ್ರಷ್ಟಾಚಾರ ದೂರವಾಗಬೇಕು ಎಂದು ಅಭಿಪ್ರಾಯಪಟ್ಟರು.  ಹಳೆಯ ಪಿಂಚಣಿ ಪದ್ಧತಿ (ಒಪಿಎಸ್) ಸೇರಿ ಶಿಕ್ಷಕರ ಸಮಸ್ಯೆಗಳ ಅರಿವಿದೆ. ಅವುಗಳಿಗೆ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.  ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, 6ನೇ ಗ್ಯಾರಂಟಿಯಾಗಿ ಒಪಿಎಸ್ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸಮಿತಿಯೊಂದನ್ನು ಸರ್ಕಾರ ರಚಿಸಿದ್ದು ಅದರ ವರದಿ ಆಧರಿಸಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.  ಮಾಯಕೊಂಡ ಕ್ಷೇತ್ರದಲ್ಲಿ ಶಾಲಾ ಕಟ್ಟಡಗಳ ಕೊರತೆಯಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹೆಚ್ಚು ಅನುದಾನ ಕೊಡಿಸಬೇಕು ಎಂದು ಮನವಿ ಮಾಡಿದರು.  ಶಿಕ್ಷಕರು ಯಾವುದೇ ಚುನಾವಣೆಯಲ್ಲಿ ಪ್ರಜ್ಞಾವಂತಿಕೆಯನ್ನು ಮೆರೆಯಬೇಕು. ಆಮಿಷಗಳಿಗೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದರು.  ವಿಧಾನ ಪರಿಷತ್ತಿನ ನೂತನ ಸದಸ್ಯ ಡಿ.ಟಿ. ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಜಗಳೂರು ಶಾಸಕ ದೇವೇಂದ್ರಪ್ಪ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ.ಎಚ್.ಬಿ. ಅರವಿಂದ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಎಚ್. ಮುರುಗೇಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಡಿಡಿಪಿಐ ಜಿ. ಕೊಟ್ರೇಶ್, ಬಿಇಒ ಪುಷ್ಪಲತಾ, ಜಿ. ಹನುಮಂತಪ್ಪ ಇದ್ದರು.  ಬಳಗದ ಅಧ್ಯಕ್ಷ ಎಸ್.ಎಲ್. ಪ್ರದೀಪ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕೆ.ಕೆ. ನಾಗರಾಜ ಸ್ವಾಗತಿಸಿದರು. ಲೀಲಾವತಿ ಪ್ರಾರ್ಥಿಸಿದರು. ಬಳಗದ ಸಂಚಾಲಕರು, ಶಿಕ್ಷಕರು ಪಾಲ್ಗೊಂಡಿದ್ದರು.  ...  (ಬಾಕ್ಸ್)  ಶೀಘ್ರವೇ ಸಹಾಯವಾಣಿ ಆರಂಭ  ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಶೀಘ್ರವೇ ಸಹಾಯವಾಣಿ ಆರಂಭಿಸಲಾಗುವುದು ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ತಾಲೂಕುಗಳಿಂದ ದಾವಣಗೆರೆಗೆ ಬರಬೇಕಾಗಿಲ್ಲ. ಅಲ್ಲಿಂದಲೇ ದೂರವಾಣಿ ಕರೆ ಮಾಡಿ ತಿಳಿಸಿದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಕ್ರಿಯಾಶೀಲ ತಂಡವೊಂದು ಕಾಲ್ ಸೆಂಟರ್ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net