ಭದ್ರಾ ನಾಲೆಗಳ ದುರಸ್ತಿಗೆ ರೈತ ಸಂಘ ಆಗ್ರಹ

farmers.jpg
Published on

ದಾವಣಗೆರೆ: ತಾಲೂಕಿನ ಕುರ್ಕಿ ಭಾಗದ ಹೈ ಲೆವೆಲ್ ನಾಲೆ ದುರಸ್ತಿಗೊಳಿಸುವುದು ಮತ್ತು ಅವುಗಳ ಹೂಳು ತೆಗೆಯಲು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರುಸೇನೆ (ಹುಚ್ಚವ್ವನಹಳ್ಳ ಮಂಜುನಾಥ್ ಬಣ) ಕಾರ್ಯಕರ್ತರು ಬುಧವಾರ ನಗರದ ಹದಡಿ ರಸ್ತೆಯಲ್ಲಿರುವ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
 ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಭದ್ರಾ ನಾಲಾ 7ನೇ ವಿಭಾಗದ ಕಾಲುವೆಗಳಲ್ಲಿ ಹಲವಾರು ತೊಂದರೆಗಳಿದ್ದು ಅವುಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಬೇಕೆಂದು ಆಗ್ರಹಿಸಿದರು.
 ಚಿಕ್ಕ ತೊಗಲೇರಿಯಿಂದ ಕುಕ್ಕವಾಡ ಗ್ರಾಮದವರೆಗೆ ಕೋಲ್ಕುಂಟೆ, ಯರವನಾಗತಿಹಳ್ಳಿ, ಕಲ್ಕೆರೆ, ಕುಕ್ಕವಾಡ, ಗೋಪನಾಳು ಗ್ರಾಮದ ಮಧ್ಯೆ ಹರಿಯುವ 7ನೇ ವಿಭಾಗದ ಕಾಲುವೆಗಳಲ್ಲಿ ಬರುವ ಲೋಕಿಕೆರೆ, ಯರವನಾಗತಿಹಳ್ಳಿ, ಕೋಲ್ಕುಂಟೆ ಸಣ್ಣ ಗೇಟುಗಳು ಶಿಥಿಲಗೊಂಡು ನೀರು ಸಾಕಷ್ಟು ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಇದರಿಂದ ಅಚ್ಚುಕಟ್ಟ ಭಾಗದ ರೈತರಿಗೆ ನೀರು ತಲುಪದೆ ಸಮಸ್ಯೆಯಾಗಿದೆ ಎಂದರು.
 ಕುರ್ಕಿ ಎಡದಂಡೆ ಮತ್ತು ಬಲದಂಡೆ ದೊಡ್ಡ ಕಾಲುವೆಯಲ್ಲಿ ಅನೇಕ ವರ್ಷಗಳಿಂದ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಮುಂದೆ ಹೋಗುತ್ತಿಲ್ಲ. ಇದರಿಂದಲೂ ಮೇಲ್ಭಾಗದ ರೈತರಿಗೆ ತೊಂದರೆಯಾಗಿದೆ. ಹೊಸ ಪೈಪುಗಳನ್ನು ಹಾಕಿ ಈ ನಾಲೆ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
 ಮುಂದಿನ 15 ದಿನಗಳಲ್ಲಿ ಬೇಡಿಕೆಗಳು ಈಡೇರದೆ ಹೋದಲ್ಲಿ ಕೈದಾಳೆ ರಸ್ತೆಯಲ್ಲಿ ರಸ್ತೆ ತಡೆ ಚಳವಳಿ ಮತ್ತು ಲೋಕಿಕೆರೆ ರಸ್ತೆಯಲ್ಲಿ ಯರನಾಗತಿಹಳ್ಳಿ ರಸ್ತೆ ಬಂದ್, ಕುರ್ಕಿ ಗ್ರಾಮದಲ್ಲಿ ಬೀರೂರು- ಬಾಡ ರಸ್ತೆಯನ್ನು ಬಂದ್ ಮಾಡುವ ಚಳವಳಿಯನ್ನು ಏಕ ಕಾಲಕ್ಕೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
 ಮನವಿ ಸ್ವೀಕರಿಸಿದ ಇಲಾಖೆಯ ಇಂಜಿನಿಯರ್‌ಗಳಾದ ಮಂಜುನಾಥ್ ಮತ್ತು ಮನೋಜ್ ಮಾತನಾಡಿ, ನಾಲೆ ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಈ ಸಂಬಂಧ ಸಭೆ ಕರೆದಿದ್ದು, ಸಮಸ್ಯೆಗಳ ಕುರಿತು ಅವರ ಗಮನ ಸೆಳೆಯುವುದಾಗಿ ತಿಳಿಸಿದರು.
 ಮುಖಂಡರಾದ ಕೈದಾಳೆ ವಸಂತಕುಮಾರ್, ಯರವನಾಗತಿಹಳ್ಳಿ ಬಾಲಾಜಿ, ಮಂಜುನಾಥ್, ಕುರ್ಕಿ ಹನುಮಂತ, ಹಿರೇ ಮಲ್ಲನಹೊಳೆ ಚಿರಂಜೀವಿ, ಕುಕ್ಕವಾಡ ಬಸವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net