

ದಾವಣಗೆರೆ: ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ದಾವಣಗೆರೆ ತಾಲೂಕು ಸಮಿತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಉಪ ವಿಭಾಗಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನವಾಗಲಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದಾಗಿ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರ ಹಿತರಕ್ಷಣೆ ಮಾಡುತ್ತಿದ್ದ ಎಪಿಎಂಸಿಗಳು ನಿಷ್ಕ್ರಿಯಗೊಂಡಿವೆ. 1961ರಲ್ಲಿ ಜಾರಿಯಾಗಿದ್ದ ಭೂ ಸುಧಾರಣಾ ಕಾಯ್ದೆಯನ್ನು 1974ರಲ್ಲಿ ಡಿ. ದೇವರಾಜ ಅರಸು ಇನ್ನಷ್ಟು ಬಲಗೊಳಿಸಿದ್ದರು. ಇದೀಗ ತಿದ್ದುಪಡಿಯಿಂದ ಮತ್ತೆ ರೈತರಿಂದ ಭೂಮಿ ಕಿತ್ತುಕೊಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ರೈತರ ಪರವಾಗಿ ಸುಧಾರಣೆಗಳನ್ನು ತರಬೇಕಾದ ಹಿಂದಿನ ಬಿಜೆಪಿ ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ತಿದ್ದುಪಡಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ಹೈನುಗಾರಿಕೆಗೆ ದೊಡ್ಡ ಪೆಟ್ಟು ನೀಡಿದೆ ಎಂದು ದೂರಿದರು.
ರೈತರಿಗೆ ಸಮರ್ಪಕ ವಿದ್ಯುತ್ ನೀಡಬೇಕು. ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ, ಅಣಬೇರು ಅಣ್ಣಪ್ಪ, ಕೊಗ್ಗನೂರು ಹನುಮಂತಪ್ಪ, ಎಸ್.ಟಿ. ಪರಮೇಶ್ವರಪ್ಪ, ಕಂಪಳಪ್ಪ ಚಟ್ಟೋಬನಹಳ್ಳಿ, ರುದ್ರಪ್ಪ ಕೊಗ್ಗನೂರು, ಸಿಡ್ಲಪ್ಪ, ದಶರಥರಾಜ್ ಪಾಲ್ಗೊಂಡಿದ್ದರು.