ರಾಜ್ಯಮಟ್ಟದಲ್ಲಿ ಎಂಎಸ್‌ಪಿ ಕಾಯ್ದೆ ಜಾರಿಗೆ ಆಗ್ರಹ

IMG-20230525-WA0082.jpg
Published on

ದಾವಣಗೆರೆ : ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವಂತಾಗಲು ರಾಜ್ಯಮಟ್ಟದಲ್ಲಿ ಎಂಎಸ್‌ಪಿ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
 ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಬಗ್ಗೆ ಘೋಷಣೆಗಳನ್ನು ಕೂಗಿದರು. ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
 ಈ ಕಾಯ್ದೆ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಿದವರಿಗೆ ಕನಿಷ್ಠ 6 ತಿಂಗಳಿಂದ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ, ಪರವಾನಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
 ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ರಾಜ್ಯ ಸರ್ಕಾರವು ಬೋನಸ್ ರೂಪದಲ್ಲಿ ಸಹಾಯಧನ ಸೇರಿಸಿ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
 ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳ ವರ್ಷಗಳ ಹಿಂದೆ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳನ್ನು ಗುರುತಿಸುವ ಮಾನದಂಡಗಳನ್ನು ರೂಪಿಸಿ, ಅದರಲ್ಲಿ ಮೊಬೈಲ್, ಮೋಟರ್ ಸೈಕಲ್ ಇರಬಾರದು ಎಂಬ ನಿಯಮ ಮಾಡಿದ್ದವು ಎಂದರು.
 ಆದರೆ ಈಗ ಕಾಲ ಬದಲಾಗಿದ್ದು ಬಿಪಿಎಲ್ ಕುಟುಂಬದವರು ಟಿವಿ, ಮೊಬೈಲ್, ಮೋಟರ್ ಸೈಕಲ್, ಜಮೀನು ಹೊಂದಿದ್ದಾರೆ. ಆದ್ದರಿಂದ ಸರ್ಕಾರವು ಬಿಪಿಎಲ್ ಕುಟುಂಬಗಳ ಮಾನದಂಡವನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
 ಅಕಾಲಿಕ ಮಳೆಗೆ ಹಾಳಾದ ಎಲ್ಲ ಬೆಳೆಗಳಿಗೆ ತಕ್ಷಣವೇ ವೈಜ್ಞಾನಿಕ ಬೆಲೆಯನ್ನು ಪರಿಹಾರವಾಗಿ ನೀಡಬೇಕು ಎಂದು ಮನವಿ ಮಾಡಿದರು.
 ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಮುಖಂಡರಾದ ಗುಮ್ಮನೂರು ಬಸವರಾಜ್, ಚಿರಂಜೀವಿ, ರಾಜು, ಭಗತ್‌ಸಿಂಹ, ಹನುಮಂತ, ಪರಶುರಾಮ್, ಬಾಲಾಜಿ, ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net