

ದಾವಣಗೆರೆ : ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಮೂಲಕ ತರೀಕೆರೆ ಮತ್ತು ಕಡೂರಿಗೆ ನೀರು ಹರಿಸುವ ಆದೇಶ ರದ್ದುಪಡಿಸುವಂತೆ ಆಗ್ರಹಿಸಿ ನಗರದಲ್ಲಿ ಗುರುವಾರ ರೈತ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ನೀರಾವರಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಚೇರಿ ಬಳಿ ಪ್ರತಿಭಟನೆ ನಡೆಸಿದ ರೈತರು, ಭದ್ರಾ ನಮ್ಮದು, ನಮ್ಮ ನೀರು ನಮ್ಮ ಹಕ್ಕು, ಕಾನೂನು ಬಾಹಿರವಾಗಿ ನೀರು ಬಿಡುವ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಕೂಗಿದರು. ಆನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಸರ್ಕಾರ ತರೀಕೆರೆ ಮತ್ತು ಕಡೂರಿಗೆ ನೀರು ಹರಿಸುವ ಆದೇಶ ರದ್ದುಪಡಿಸಬೇಕು. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನಿರ್ಣಯಿಸದೆ ನೀರು ಬಿಡುವ ತೀರ್ಮಾನ ಕೈಗೊಳ್ಳಬಾರದು. ತಕ್ಷಣ ಭದ್ರಾ ನೀರಾವರಿ ಸಲಹಾ ಸಮಿತಿ ಕರೆದು ಬೇಸಿಗೆ ಹಂಗಾಮಿಗೆ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ತುಂಗಾದಿಂದ ಭದ್ರಾಕ್ಕೆ ಹರಿಸಬೇಕಾದ ನೀರನ್ನು ಲಿಫ್ಟ್ ಮಾಡುವ ತೀರ್ಮಾನ ಕೈಗೊಳ್ಳಬೇಕು. ಭದ್ರಾ ಮೇಲ್ದಂಡೆ ಯೋಜನೆ ಷರತ್ತಿನಂತೆ ತುಂಗಾದಿಂದ ಭದ್ರಾ ಡ್ಯಾಂಗೆ ನೀರು ಲಿಫ್ಟ್ ಮಾಡುವವರೆಗೆ ಭದ್ರಾ ಮೇಲ್ದಂಡೆ ಭಾಗಕ್ಕೆ ನೀರು ಹರಿಸಬಾರದು ಆಗ್ರಹಿಸಿದರು.
ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಭದ್ರಾ ಜಲಾಶಯದಿಂದ ನೀರು ಹರಿಸುವ ಕುರಿತಂತೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳದೆ ಬೆಂಗಳೂರಿನಿಂದ ಆದೇಶ ಹೊರಡಿಸುವ ಕೆಟ್ಟ ಸಂಪ್ರದಾಯ ಸರ್ಕಾರ ಹುಟ್ಟುಹಾಕಿದೆ ಎಂದು ಖಂಡಿಸಿದರು.
ಕುಡಿಯುವ ನೀರಿನ ನೆಪವೊಡ್ಡಿ ನೀರು ಹರಿಸುವ ಕಾರ್ಯ ಆಗಬಾರದು. ಬೆಳೆ ಪದ್ಧತಿ ಹಾಗೂ ನೀರಿನ ಲಭ್ಯತೆ ನೋಡಿಕೊಂಡು ರೈತರು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಹರಿಸುವ ತೀರ್ಮಾನ ಕೈಗೊಳ್ಳಬೇಕು. ಜನಪ್ರತಿನಿಧಿಗಳಿಗೆ ಸಭೆಗೆ ಹೋಗಲು ಆಗದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಬೆಳವನೂರು ನಾಗೇಶ್ವರರಾವ್ ಮಾತನಾಡಿ, ಭದ್ರಾ ಜಲಾಶಯ ನೀರು ನಿರ್ವಹಣೆ ವಿಚಾರದಲ್ಲಿ ಸರ್ಕಾರ ತನಗೆ ತಿಳಿದಂತೆ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಸರ್ಕಾರದ ಕೈಯಲ್ಲಿ ಸಮರ್ಪಕ ನಿರ್ಧಾರ ಕೈಗೊಳ್ಳಲು ಆಗದಿದ್ದರೆ ರೈತರ ಸುಪರ್ದಿಗೆ ವಹಿಸಲಿ ಎಂದು ಒತ್ತಾಯಿಸಿದರು.
ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಷರತ್ತಿನಂತೆ ಮಳೆಗಾಲದ ಸಂದರ್ಭದಲ್ಲಿ ತುಂಗಾದಿಂದ ಭದ್ರಾಗೆ 27 ಟಿಎಂಸಿ ನೀರು ಹರಿಸಬೇಕು. ಆನಂತರ ಅಪ್ಪರ್ ಭದ್ರಾಗೆ ನೀರು ಲಿಫ್ಟ್ ಮಾಡಿಕೊಳ್ಳಬೇಕು ಎಂದು ಹೇಳಿದರು.
ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಎಚ್.ಆರ್.ಲಿಂಗರಾಜ್ ಮಾತನಾಡಿ, ತರೀಕೆರೆ ಮತ್ತು ಕಡೂರಿಗೆ ಪ್ರತಿ ದಿನ 700 ಕ್ಯೂಸೆಕ್ಸ್‌ನಂತೆ 4 ದಿನ ನೀರು ಬಿಡುವುದಾಗಿ ಘೋಷಣೆ ಮಾಡಿರುವುದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬಹಳ ಅನ್ಯಾಯವಾಗಲಿದೆ. ಸರ್ಕಾರ ಆದೇಶ ರದ್ದುಪಡಿಸದಿದ್ದರೆ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಕೊಳೇನಹಳ್ಳಿ ಸತೀಶ್, ಲೋಕಿಕೆರೆ ನಾಗರಾಜ್, ಧನಂಜಯ್ ಕಡ್ಲೇಬಾಳ್ ಇತರರು ಪ್ರತಿಭಟನೆಯಲ್ಲಿದ್ದರು.