

ದಾವಣಗೆರೆ: ಜಿಲ್ಲೆಯಲ್ಲಿ ಮಳೆ ಅಭಾವದಿಂದ ಶೇ.75ರಷ್ಟು ಬೆಳೆನಾಶ ಉಂಟಾಗಿದ್ದು, ಸರ್ಕಾರ ತುರ್ತು ಕ್ರಮ ಕೈಗೊಂಡು ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಒತ್ತಾಯಿಸಿದರು.
ರೈತಸಂಘದಿಂದ ನಗರದ ಎಪಿಎಂಸಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಳೆ ಕೊರತೆಯಿಂದ ಮೆಕ್ಕೇಜೋಳ ಇನ್ನಿತರ ಬೆಳೆಗಳ ಹಾನಿ ಹಾಗೂ ಭದ್ರಾ ನೀರಿನ ವಿಚಾರ ಕುರಿತ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ 1,27,907 ಹೆಕ್ಟೇರ್ ಮೆಕ್ಕೆಜೋಳ, 6052 ಹೆ. ರಾಗಿ, 10,100 ಹೆ. ತೊಗರಿ, 15565 ಹೆ. ಶೇಂಗಾ ಬಿತ್ತನೆಯಾಗಿದ್ದು, ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಶೇ. 75ರಷ್ಟು ಬೆಳೆನಷ್ಟ ಸಂಭವಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ಬರಗಾಲ ಸ್ಥಿತಿ ತಲೆದೋರಿದ್ದರೂ ರಾಜ್ಯದ ಕೃಷಿ ಸಚಿವರು ಯಾವ ಜಿಲ್ಲೆಗೂ ಭೇಟಿ ನೀಡಿಲ್ಲ. ಜಿಲ್ಲೆಯ ಯಾವ ಶಾಸಕರೂ ರೈತರ ಸಮಸ್ಯೆ ಆಲಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ತುರ್ತು ಸಭೆ ಕರೆಯಬೇಕು ಎಂದು ಒತ್ತಾಯಿಸಿದ ಅವರು, ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಭದ್ರಾ ಅಚ್ಚುಕಟ್ಟಿನಲ್ಲಿ ದಾವಣಗೆರೆ ಹಾಗೂ ಮಲೇಬೆನ್ನೂರು ವಿಭಾಗದಲ್ಲಿ 1,99,990 ಎಕರೆ ನಾಟಿ ಮಾಡಲಾಗುತ್ತಿದ್ದು, ಭದ್ರಾ ಜಲಾಶಯದಿಂದ ನೀರು ಹರಿಸಿದರೆ ದಾವಣಗೆರೆ ಉಪವಿಭಾಗದ ಮಲೇಬೆನ್ನೂರು, ಹರಿಹರ ಹಾಗೂ ಮೇಗಳಗೆರೆ ಪ್ರದೇಶಗಳಿಗೆ ಕೇವಲ 75 ದಿನ ನೀರು ಲಭಿಸುತ್ತದೆ. ಇನ್ನು 2008ರಲ್ಲಿ ಭದ್ರಾ ನಾಲೆ ಆಧುನೀಕರಣ ಕಳಪೆ ಕಾಮಗಾರಿಯಿಂದ ಶೇ.30ರಷ್ಟು ನೀರು ಸೋರಿಕೆಯಾಗುತ್ತಿದೆ. ಶೇ.70ರಷ್ಟು ನೀರನ್ನು ರೈತರು ಹಂಚಿಕೊಳ್ಳುವ ಪರಿಸ್ಥಿತಿಯಿದೆ ಎಂದು ಹೇಳಿದರು.
ಭತ್ತದ ಬೆಳೆಗೆ ಕನಿಷ್ಟ 110 ದಿನವಾದರೂ ನೀರು ಬೇಕು. ಮಲೇಬೆನ್ನೂರು, ಹರಿಹರ ವಿಭಾಗದ ರೈತರು ಭತ್ತ ಬೆಳೆಯಲು ಸಾಧ್ಯವಾಗದು. ಒಂದು ಎಕರೆ ಭತ್ತದ ನೀರಿಗೆ 15 ಎಕರೆ ಅರೆ ನೀರಾವರಿ ಮಾಡಬಹುದಾಗಿದ್ದು ರೈತರು ಭತ್ತದ ನಾಟಿ ಮಾಡಿ ಬೀಜ ಗೊಬ್ಬರದ ಅಂಗಡಿಯವರನ್ನು ಶ್ರೀಮಂತರನ್ನಾಗಿಸದೆ ಅರೆ ನೀರಾವರಿ ಬೆಳೆ ಪದ್ಧತಿಗೆ ಮುಂದಾಗಬೇಕು ಎಂದು ತಿಳಿಸಿದರು.
ಇನ್ನು ವಿದ್ಯುತ್ ಇಲಾಖೆಯವರು 7 ತಾಸು ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿಪರೀತ ಲೋಡ್‌ಶೆಡ್ಡಿಂಗ್ ಮಾಡುತ್ತಿದ್ದು ವಿದ್ಯುತ್ ನಂಬಿಕೊಂಡ ರೈತರು ಹೇಗೆ ಬೆಳೆ ತೆಗೆಯಬೇಕು ಎಂದು ಪ್ರಶ್ನಿಸಿದರು.
ರೈತ ಮುಖಂಡ ಬಸವರಾಜಪ್ಪ ಮಾತನಾಡಿ, ಮಳೆಕೊರತೆಯಿಂದ ಮೆಕ್ಕೆಜೋಳ, ರಾಗಿ, ಶೇಂಗಾ ಮೊದಲಾದ ಬೆಳೆಗಳ ನಷ್ಟ ಉಂಟಾಗಿದ್ದು ರೈತರಿಗೆ ಬೆಳೆಹಾನಿ ಪರಿಹಾರ ಕೊಡುವ ವ್ಯವಸ್ಥೆ ಮಾಡಬೇಕು, ಪ್ರತಿವರ್ಷ ಬೆಳೆವಿಮೆ ಪಾವತಿಸಿದರೂ ಕೆಲವು ರೈತರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಬಗರ್‌ಹುಕುಂ ಜಮೀನು ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ ಹಲವು ನಿಯಮಾವಳಿ ಹೇರಿ ಅಧಿಕಾರಿಗಳು ಹಕ್ಕುಪತ್ರ ಸಿಗದಂತೆ ಮಾಡುತ್ತಿದ್ದಾರೆ ಎಂದು ದೂರಿದರು.
ರೈತ ಮಾಯಕೊಂಡ ಪ್ರತಾಪ್ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಬಾರದ ಕಾರಣ ಮೆಕ್ಕೆಜೋಳ ಬೆಳೆ ಒಣಗುತ್ತಿದ್ದು ರೈತರು ಕಟಾವು ಮಾಡಿ ದನಕರುಗಳಿಗೆ ಹಾಕುತ್ತಿದ್ದಾರೆ. ಫಸಲ್ ಭಿಮಾ ಯೋಜನೆ ಬೆಳೆವಿಮೆ ಪರಿಹಾರವೂ ರೈತರಿಗೆ ದೊರಕುತ್ತಿಲ್ಲ. ರೈತರಿಗೆ ಬೆಳೆ ಹಾನಿ ಪರಿಹಾರಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕಬ್ಬಳ ಪ್ರಸಾದ್, ಕಾರ್ಯಾಧ್ಯಕ್ಷ ಮಾಯಕೊಂಡ ಅಶೋಕ್, ಶಿವಮೂರ್ತಪ್ಪ ಐಗೂರು, ಕೋಗಳಿ ಮಂಜುನಾಥ್ ಇತರರು ಸಭೆಯಲ್ಲಿದ್ದರು.