

ದಾವಣಗೆರೆ : ಮೆಕ್ಕೆಜೋಳ ಬಿತ್ತನೆ ಬೀಜದ ದರ ಹೆಚ್ಚಳ ವಿರೋಧಿಸಿ ಮತ್ತು ರಸಗೊಬ್ಬರ ಕೃತಕ ಅಭಾವ ಖಂಡಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಕಾರ್ಯಕರ್ತರು ಬುಧವಾರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾದ್ಯಂತ ಈಗಾಗಲೇ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ರೈತಾಪಿ ವರ್ಗ ಜಮೀನುಗಳನ್ನು ಹಸನು ಮಾಡಿಕೊಂಡು ಬಿತ್ತನೆಗಾಗಿ ಕಾಯುತ್ತಿದ್ದಾರೆ. ಇದರ ಮಧ್ಯೆ ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳ ಬಿತ್ತನೆ ಬೀಜ ಪ್ರತಿ ಪ್ಯಾಕೆಟ್ ದರ ಕಳೆದ ವರ್ಷಕ್ಕೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ 300 ರಿಂದ 500 ರೂ. ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ 500 ರಿಂದ 1000 ರೂ. ಜಾಸ್ತಿಯಾಗಿದೆ ಎಂದು ತಿಳಿಸಿದರು. ಡಿಎಪಿ ಗೊಬ್ಬರದ ಕೊರತೆಯನ್ನು ಕೃತಕವಾಗಿ ಸೃಷ್ಟಿಸಲಾಗುತ್ತಿದೆ. ಈ ಮೂಲಕ ವರ್ತಕರು 3500 ರೂ. ವರೆಗೂ ಪ್ರತಿ ಕ್ವಿಂಟಾಲ್ ಡಿಎಪಿ ಮಾರಾಟ ಮಾಡುತ್ತಿದ್ದಾರೆ. ದಾವಣಗೆರೆ ತಾಲೂಕಿನಾದ್ಯಂತ ಈ ಪರಿಸ್ಥಿತಿಯಿದೆ ಎಂದು ರೈತರು ಆರೋಪಿಸಿದರು. ಇಲಾಖೆ ಬಿತ್ತನೆ ಬೀಜದ ದರ ಇಳಿಕೆ ಮಾಡಿ ಕಳೆದ ವರ್ಷದ ದರದಲ್ಲಿಯೇ ಮಾರಾಟವಾಗುವಂತೆ ನೋಡಿಕೊಳ್ಳಬೇಕು. ಡಿಎಪಿ ಗೊಬ್ಬರ ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಸರಳವಾಗಿ ದೊರೆಯುವಂತೆ ಮಾಡಬೇಕು. ಅದೂ ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಮಾರಾಟವಾಗಬೇಕು. ಅಧಿಕ ಬೆಲೆಗೆ ಮಾರಾಟ ಮಾಡುವ ಮತ್ತು ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಇಲ್ಲವಾದಲ್ಲಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಹೇಳಿದರು. ಮನವಿ ಸ್ವೀಕರಿಸಿದ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ಕೂಡಲೇ ವಿಚಕ್ಷಣ ದಳ ರಚನೆ ಮಾಡಿ ಕಾಳಸಂತೆಯಲ್ಲಿ ಗೊಬ್ಬರ ಮಾರಾಟಗಾರರು ಮತ್ತು ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ನಿಗಾ ವಹಿಸಲಾಗುವುದು ಎಂದರು. ಎಲ್ಲ ರೈತರಿಗೂ ಸಮರ್ಪಕವಾಗಿ ಗೊಬ್ಬರ ಮತ್ತು ಬೀಜ ಸಿಗುವ ವ್ಯವಸ್ಥೆಯನ್ನು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು. ರೈತ ಮುಖಂಡರಾದ ಹೂವಿನಮಡು ನಾಗರಾಜ್, ಹುಚ್ಚವ್ವನಹಳ್ಳಿ ಪ್ರಕಾಶ್, ದಯಾನಂದ, ಗುಮ್ಮನೂರು ರುದ್ರೇಶ್, ಚಿನ್ನಸಮುದ್ರ ಸುರೇಶ್ ನಾಯ್ಕ, ದೇವನಾಯ್ಕ್, ಗಿರಿಯಾಪುರ ಗಂಗಾಧರ ಸ್ವಾಮಿ, ಹೊನ್ನಮರಡಿ ಶಿವಕುಮಾರ್ ಇತರರು ಇದ್ದರು.