ಭದ್ರಾ ನಾಲೆಗೆ ನೀರು ಹರಿಸಲು ರೈತರ ಒಕ್ಕೂಟ ಆಗ್ರಹ

dvg-raithara-okkuta.jpg
Published on

ದಾವಣಗೆರೆ : ಬೇಸಿಗೆ ಹಂಗಾಮಿನ ಭತ್ತದ ಬೆಳೆಗೆ ಜ.5 ರಿಂದ ಭದ್ರಾ ನಾಲೆಗಳಿಗೆ ನೀರು ಹರಿಸಬೇಕು ಎಂದು ಜಿಲ್ಲಾ ರೈತರ ಒಕ್ಕೂಟವು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.  ಜಿಲ್ಲೆಯ ರೈತರ ಜೀವನಾಡಿಯಾದ ಭದ್ರಾ ಡ್ಯಾಂ ನೀರಿನ ಲಭ್ಯತೆಯಿಂದ ಜಿಲ್ಲೆಯಲ್ಲಿ ಸುಮಾರು 1.60 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ ಎಂದು ರೈತ ಮುಖಂಡ ಕೊಳೇನಹಳ್ಳಿ ಬಿ. ಎಂ. ಸತೀಶ್ ತಿಳಿಸಿದರು.  ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯಲು ಕೊಳವೆಬಾವಿ ಮತ್ತಿತರ ನೀರಿನ ಸೌಲಭ್ಯ ಇರುವವರು ಈಗಾಗಲೇ ಸಸಿಮಡಿ ತಯಾರಿಸಿ ಬೀಜ ಚೆಲ್ಲಿದ್ದಾರೆ. ಇನ್ನುಳಿದ ಕೆಲವು ರೈತರು ಸಸಿಮಡಿಗೆ ಬೀಜ ಚೆಲ್ಲಲು ಕಾಲುವೆಗಳಲ್ಲಿ ನೀರು ಹರಿಸುವುದನ್ನು ಕಾಯುತ್ತಿದ್ದಾರೆ.  ಇನ್ನು ನೇರವಾಗಿ ಚೆಲ್ಲುವ ಭತ್ತ ಪದ್ಧತಿ ಅನುಸರಿಸುವವರು ಜಲಾಶಯದಿಂದ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಪ್ರಸ್ತುತ ಡ್ಯಾಂನಲ್ಲಿ 183 ಅಡಿ ನೀರು ಇದ್ದು, ತಡವಾದರೆ ಬೇಸಿಗೆ ಹಂಗಾಮಿನಲ್ಲಿ ಭತ್ತದ ಬೆಳೆಗೆ ಅನಾನುಕೂಲವಾಗುತ್ತದೆ. ಆದ್ದರಿಂದ ತಕ್ಷಣ ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಸಭೆ ಕರೆದು ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.  ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿ ಮತ್ತು ಹೂಳನ್ನು ತೆಗೆಯಿಸಿ, ನೀರು ಸರಾಗವಾಗಿ ಕೊನೆಯ ಭಾಗಕ್ಕೆ ಹರಿಯುವಂತೆ ಮಾಡಬೇಕು ಹಾಗೂ ಭದ್ರಾ ಜಲಾಶಯದ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಿ ಸೂಕ್ತ ಭದ್ರತೆ ಕ್ರಮ ಕೈಗೊಳ್ಳಬೇಕು. ಡ್ಯಾಂ ನಿರ್ವಹಣೆಯ ಕ್ರೇನ್‌ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಡ್ಯಾಂ ತಳಭಾಗದ ಬಫರ್ ಜೋನ್ ಪ್ರದೇಶದಲ್ಲಿ ಯಾವುದೇ ರೀತಿ ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.  ಮುಖಂಡರಾದ ಅಣಬೇರು ಕುಮಾರಸ್ವಾಮಿ, ಎಚ್.ಎನ್.ಗುರುನಾಥ್, ಕುರ್ಕಿ ರೇವಣಸಿದ್ದಪ್ಪ, ಕುಂದುವಾಡದ ಜಿಮ್ಮಿ ಹನುಮಂತಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net