ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ,  ಕ್ರಮಕ್ಕೆ ರೈತ ಸಂಘದ ಆಗ್ರಹ

IMG-20250729-WA0009.jpg
Published on

ದಾವಣಗೆರೆ : ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ಅಧ್ಯಕ್ಷ ಮಂಡಲೂರು ವಿಶ್ವನಾಥ ಆಗ್ರಹಿಸಿದರು.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೂರಿಯಾ ಗೊಬ್ಬರದ ಒಂದು ಪ್ಯಾಕೆಟ್‌ನ ಮೂಲ ಬೆಲೆ 2450 ರೂ. ಆಗಿದೆ. ಸರ್ಕಾರ 2183 ರೂ. ಸಬ್ಸಿಡಿ ನೀಡುತ್ತದೆ. ಹಾಗಾಗಿ ಒಂದು ಪ್ಯಾಕೆಟ್ ಗೊಬ್ಬರ ಬೆಲೆ 266.50 ರೂ. ಆಗಿದೆ ಎಂದು ತಿಳಿಸಿದರು.  ಲಾರಿ ಬಾಡಿಗೆ, ಹಮಾಲಿ ಇತರೆ ಖರ್ಚು ಇರುವುದರಿಂದ ಒಂದು ಪ್ಯಾಕೆಟ್ ಗೊಬ್ಬರದ ಗರಿಷ್ಠ ಬೆಲೆ 300 ರೂ. ಇದೆ. ರೈತರು ಇಷ್ಟೇ ಹಣ ನೀಡಿ ಗೊಬ್ಬರ ಖರೀದಿಸಬೇಕು ಎಂದು ಮನವಿ ಮಾಡಿದರು.  ಜಿಲ್ಲೆಯಲ್ಲಿ 180 ಸೊಸೈಟಿಗಳಿವೆ. ಸರ್ಕಾರ ಆ ಸೊಸೈಟಿಗಳಿಗೆ ಸಮರ್ಪಕ ಯೂರಿಯಾ ಗೊಬ್ಬರ ಒದಗಿಸಿದರೆ ರೈತರಿಗೆ ಹಣ ಮತ್ತು ಸಮಯ ಉಳಿತಾಯವಾಗುತ್ತದೆ ಎಂದರು.  ನ್ಯಾನೋ ರಸಗೊಬ್ಬರದ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಅದರ ಪ್ರಯೋಜನ, ಬಳಕೆ ಮಾಡುವ ವಿಧಾನದ ಬಗ್ಗೆ ತಿಳಿಸಬೇಕು. ಇದರಿಂದ ಸರ್ಕಾರಕ್ಕೆ ಸಬ್ಸಿಡಿ ಹಣ ಉಳಿತಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಯೂರಿಯಾ ಖರೀದಿಸುವ ವೇಳೆ ಯಾವುದೇ ಉತ್ಪನ್ನಗಳನ್ನು ಲಿಂಕ್ ಮಾಡಬಾರದು. ರೈತರಿಗೆ ಒತ್ತಾಯ ಮಾಡಿರುವುದು ಕಂಡುಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕೃಷಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಮುಖಂಡರಾದ ನವೀನ್, ಶಿವಕುಮಾರ್, ಪ್ರಸನ್ನ ಕುಮಾರ್, ನಾಗರಾಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net